ದೇಶ

'ದೇಶ ಬಿಟ್ಟು ತೆರಳಿ': ಸಿಎಎ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಾರ್ವೇ ಪ್ರಜೆಗೆ ಸೂಚನೆ!

Srinivasamurthy VN

ಕೊಚ್ಚಿನ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ನಾರ್ವೇ ದೇಶದ ಪ್ರಜೆಯೊಬ್ಬರಿಗೆ ದೇಶ ಬಿಟ್ಟು ತೆರಳುವಂತೆ ಸೂಚನೆ ನೀಡಲಾಗಿದೆ.

ಹೌದು.. ಇದೇ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಾರ್ವೆ ದೇಶದ ಪ್ರಜೆ, 71 ವರ್ಷದ ಜೇನ್ನ್-ಮೆಟ್ಟೆ ಜೊಹಾನ್ಸನ್ ಎಂಬಾಕೆಯನ್ನು ತಕ್ಷಣ ದೇಶ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಜೇನ್ನ್-ಮೆಟ್ಟೆ ಜೊಹಾನ್ಸನ್ ಭಾರತದ ವೀಸಾ ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಕಾನೂನಾತ್ಮಕವಾಗಿಯೇ ಅವರಿಗೆ ದೇಶ ಬಿಟ್ಟು ತೆರಳಲು ಸೂಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‍.ಆರ್.ಆರ್.ಒ) ಅಧಿಕಾರಿ ಅನೂಪ್ ಕೃಷ್ಣನ್, 'ಜೊಹಾನ್ಸನ್ ಅವರನ್ನು ದೇಶ ಬಿಟ್ಟು ತೆರಳಲು ಸೂಚಿಸಲಾಗಿದೆ. ಇದು ಗಡೀಪಾರು ಅಲ್ಲ. ಆಕೆ ಪ್ರತಿಭಟನೆಯಲ್ಲಿ ಭಾಗವಹಿಸಿ ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಆದಷ್ಟು ಬೇಗ ಇಲ್ಲಿಂದ ತೆರಳುವಂತೆ ಆಕೆಗೆ ಸೂಚಿಸಿದ್ದೇವೆ. ಆಕೆಯೇ ಸ್ವತಃ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿದ್ದರು. ಸದ್ಯ ಆಕೆಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸಲಾಗಿಲ್ಲ ಎಂದು ಹೇಳಿದ್ದಾರೆ.

ಜೇನ್ನ್-ಮೆಟ್ಟೆ ಜೊಹಾನ್ಸನ್ ಅಸಮಾಧಾನ
ಇನ್ನು ಅಧಿಕಾರಿಗಳ ಸೂಚನೆಗೆ ಜೊಹಾನ್ಸನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, 'ಶುಕ್ರವಾರ ಸಂಜೆ 6 ಗಂಟೆಯೊಳಗಾಗಿ ದೇಶ ಬಿಟ್ಟು ತೆರಳದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಲಿಖಿತ ಆದೇಶ ನೀಡುವಂತೆ ಅವರನ್ನು ಕೇಳಿದರೂ ಅವರು ನೀಡಿಲ್ಲ. ಇದು ಬೆದರಿಕೆ ಅಲ್ಲದೆ ಮತ್ತಿನ್ನೇನಲ್ಲ' ಎಂದು ಹೇಳಿದ್ದಾರೆ.

ಇನ್ನು ಜೊಹಾನ್ಸನ್ ಭಾರತಕ್ಕೆ ಅಕ್ಟೋಬರ್ ತಿಂಗಳಲ್ಲಿ ಆಗಮಿಸಿದ್ದು ಮುಂಬೈ, ಲಖನೌಗೆ ಭೇಟಿ ನೀಡಿದ ನಂತರ ಒಂದು ವಾರದ ಹಿಂದೆ ಕೇರಳಕ್ಕೆ ಆಗಮಿಸಿದ್ದರು. ಆಕೆಯ ಟೂರಿಸ್ಟ್ ವೀಸಾ ಮಾರ್ಚ್ 2020ರಲ್ಲಿ ಕೊನೆಗೊಳ್ಳಲಿದೆ.

SCROLL FOR NEXT