ದೇಶ

ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ನಂತರ ಉಗ್ರರ ಕೃತ್ಯಗಳು ಕಡಿಮೆಯಾಗಿವೆ: ನೂತನ ಸೇನಾ ಮುಖ್ಯಸ್ಥ

Lingaraj Badiger

ನವದೆಹಲಿ: ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿರುವ ನೂತನ ಸೇನಾ ಮುಖ್ಯಸ್ಥ ಜನರಲ್​ ಮನೋಜ್ ಮುಕುಂದ್​ ನರಾವಣೆ ಅವರು, ನೆರೆ ರಾಷ್ಟ್ರ ಭಯೋತ್ಪಾದನೆಯನ್ನೇ ರಾಜ್ಯ ನೀತಿಯನ್ನಾಗಿಸಿಕೊಂಡಿದೆ ಎಂದು ಕಿಡಿ ಕಾರಿದ್ದಾರೆ.

ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ಪಿಟಿಐಗೆ ಸಂದರ್ಶನ ನೀಡಿದ ಅವರು, ಭಯೋತ್ಪಾದನೆ ಎಂಬುದು ಈಗ ಜಾಗತಿಕ ಸಮಸ್ಯೆಯಾಗಿದೆ. ಇದರಿಂದ ಭಾರತವು ಹೊರತಾಗಿಲ್ಲ. ಈಗ ಪ್ರಪಂಚ ಮತ್ತು ಹಲವು ದೇಶಗಳು ಭಯೋತ್ಪಾದನೆ ಕರಿ ನೆರಳಿನ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದಿದ್ದಾರೆ.

ನಮ್ಮ ನೆರೆ ದೇಶ ಭಯೋತ್ಪಾದನೆಯನ್ನು ಬಳಸಿ ನಮ್ಮ ಮೇಲೆ ಯುದ್ಧ ಸಾರುತ್ತಿರುತ್ತದೆ. ನಾವು ಈ ಬಗ್ಗೆ ಶಾಂತಿ ಕಾಪಾಡಿಕೊಂಡಿದ್ದೇವೆ. ಆದರೆ ಆ ದೇಶಕ್ಕೆ ಉಳಿಗಾಲವಿಲ್ಲ. ಎಲ್ಲ ಸಮಯದಲ್ಲೂ ಎಲ್ಲರನ್ನು ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

370 ನೇ ವಿಧಿ ರದ್ದು ಮಾಡಿರುವುದರಿಂದ ಜಮ್ಮು ಕಾಶ್ಮೀರದ ಅಭಿವೃದ್ಧಿಯಾಗಲಿದೆ. ಈಗ ಅಲ್ಲಿ ಉಗ್ರರ ಕೃತ್ಯಗಳು ಕಡಿಮೆಯಾಗಿವೆ. ಇದರಿಂದ ಅಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ನರಾವಣೆ ಹೇಳಿದರು.

ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ಇಂದು ನಿವೃತ್ತರಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಲೆ.ಜ.ಮನೋಜ್ ಅವರು ನೇಮಕಗೊಂಡಿದ್ದಾರೆ.

ಸೇನೆಯಲ್ಲಿ 37 ವರ್ಷ ಸೇವೆಯ ಅನುಭವ ಹೊಂದಿರುವ ಲೆ.ಜ.ಮನೋಜ್ ಈ ಅವಧಿಯಲ್ಲಿ ಚೀನಾ ಗಡಿ, ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಮಹತ್ವದ ಹುದ್ದೆ ನಿರ್ವಹಿಸಿದ್ದಾರೆ. ಇವರಿಗೆ ಈಗಾಗಲೇ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಠ ಸೇವಾ ಪದಕಗಳು ಸಂದಿವೆ. 

SCROLL FOR NEXT