ದೇಶ

ಸೀಮಿತ ಆಯ್ಕೆ: ಸಚಿವ ಸ್ಥಾನ ವಂಚಿತ ಶಿವಸೇನಾ ಶಾಸಕರ ಬಗ್ಗೆ ಸಂಜಯ್ ರೌತ್

Lingaraj Badiger

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತ ಶಿವಸೇನಾ ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನಾ ಸಂಸದ ಸಂಜಯ್ ರೌತ್ ಅವರು, ಮೂರು ಪಕ್ಷಗಳ ಮೈತ್ರಿ ಸರ್ಕಾರದಲ್ಲಿ ಆಯ್ಕೆ ಸೀಮಿತವಾಗಿದೆ ಎಂದಿದ್ದಾರೆ.

ಮಿತ್ರ ಪಕ್ಷಗಳಿಗೂ ಸಚಿವ ಸ್ಥಾನ ಬಿಟ್ಟುಕೊಡಬೇಕಾಗಿರುವುದರಿಂದ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಹೆಚ್ಚಿನ ಆಯ್ಕೆ ಇಲ್ಲ ಎಂದು ಶಿವಸೇನಾ ಮುಖವಾಣಿ ಸಾಮ್ನಾ ಸಂಪಾದಕರಾಗಿರುವ ಸಂಜಯ್ ರೌತ್ ಅವರು ಹೇಳಿದ್ದಾರೆ.

ಹೊಸ ಮುಖಗಳಿಗೂ ನಾವು ಅವಕಾಶ ನೀಡಬೇಕಾಗಿರುವುದರಿಂದ ಕೆಲವು ಹಿರಿಯರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ರೌತ್ ಹೇಳಿದ್ದಾರೆ.

ಉದ್ಧವ್ ಠಾಕ್ರೆ ಅವರು ನಿನ್ನೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಪುತ್ರ ಆದಿತ್ಯ ಠಾಕ್ರೆ ಸಚಿವರಾಗಿ, ಎನ್ ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಹಾಗೂ ಕಾಂಗ್ರೆಸ್ ನ ಅಶೋಕ್ ಚವ್ಹಾಣ್ ಸೇರಿದಂತೆ ಹಲವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಿವಸೇನೆಯ ರಾಮದಾಸ್ ಕದಂ, ದಿವಾಕರ್ ರೌಟೆ, ರವೀಂದ್ರ ವೈಕರ್, ದೀಪಕ್ ಕೆಸರಕರ್, ಸಂಜಯ್ ರೌತ್ ಸಹೋದರ ಸುನಿಲ್ ರೌತ್ ಹಾಗೂ ತಾನಾಜಿ ಸಾವಂತ್ ಅವರಿಗೆ ನಿರಾಶೆಯಾಗಿದೆ.

ಇನ್ನು ಸಹೋದರನಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಂಜಯ್ ರೌತ್ ಅವರು ಪ್ರಮಾಣವಚನ ಸಮಾರಂಭಕ್ಕೆ ಗೈರು ಆಗಿದ್ದರು.

SCROLL FOR NEXT