ದೇಶ

ಭೀಮಾ ಕೋರೆಗಾಂವ್ ಪ್ರಕರಣ: ಪುಣೆ ಪೊಲೀಸರಿಂದ ಮತ್ತೊಬ್ಬ ಹೋರಾಟಗಾರನ ಬಂಧನ

Srinivasamurthy VN
ಪುಣೆ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಮತ್ತೋರ್ವ ಹೋರಾಟಗಾರರನ್ನು ಬಂಧಿಸಿದ್ದು, ಇಂದು ಮುಂಜಾನೆ ಖ್ಯಾತ ದಲಿತಪರ ಹೋರಾಟಗಾರ ಆನಂದ್ ತೆಲ್ತುಂಬೆಡ್ ಅವರನ್ನು ಬಂಧಿಸಿದ್ದಾರೆ.
ಪುಣೆಯಲ್ಲಿನ ಅವರ ನಿವಾಸದಿಂದಲೇ ಆನಂದ್ ತೆಲ್ತುಂಬೆಡ್ ಅವರನ್ನು ಬಂಧಿಸಲಾಗಿದ್ದು, ಇಂದು ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸುವ ಸಾಧ್ಯತೆ ಇದೆ. ಇನ್ನು ಇತ್ತೀಚೆಗಷ್ಟೇ ಪುಣೆ ನ್ಯಾಯಾಲಯ ಆನಂದ್ ತೆಲ್ತುಂಬೆಡ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. 
ಪುಣೆ ಪೊಲೀಸ್ ಮೂಲಗಳು ತಿಳಿಸಿರುವಂತೆ ಭೀಮಾ ಕೋರೆಗಾಂವ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಹೋರಾಟಗಾರ ಆನಂದ್ ತೆಲ್ತುಂಬೆಡ್ ಅವರ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೂ ಸಲ್ಲಿಕೆ ಮಾಡಿದ್ದು, ಇದೇ ಕಾರಣಕ್ಕೆ ಪುಣೆ ನ್ಯಾಯಾಲಯ ಆನಂದ್ ತೆಲ್ತುಂಬೆಡ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ ಎನ್ನಲಾಗಿದೆ.
2017ರ ಡಿಸೆಂಬರ್ 31ರಂದು ಎಲ್ಗಾರ್ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಲಿತಪರ ಹೋರಾಟಗಾರರು ಮಾಡಿದ್ದ ಪ್ರಚೋದನಾಕಾರಿ ಭಾಷಣದಿಂದಲೇ ಹಿಂಸಾಚಾರ ಭುಗಿಲೆದ್ದಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಈ ಕುರಿತು ಸಂಪೂರ್ಣ ಆರೋಪ ಪಟ್ಟಿಯನ್ನು ಪೊಲೀಸ್ ಅಧಿಕಾರಿಗಳು ಪುಣೆ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ ಆನಂದ್ ತೆಲ್ತುಂಬೆಡ್ ಅಲ್ಲದೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರೆ 7 ಮಂದಿ ಹೋರಾಟಗಾರರ ಹೆಸರನ್ನು ಅಧಿಕಾರಿಗಳು ಆರೋಪ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ. 
ಆನಂದ್ ತೆಲ್ತುಂಬೆಡ್  ಬಂಧನಕ್ಕೂ ಮುನ್ನ ಪೊಲೀಸರು ಇತರೆ ಆರೋಪಿಗಳಾದ ಸುಧಾ ಭಾರಧ್ವಾಜ್, ಪಿ ವರವರ ರಾವ್, ವೆರ್ನಾನ್ ಗೊನ್ಜಾಳ್ವಾಸ್ ಮತ್ತು ಅರುಣ್ ಪರೇರ ಅವರನ್ನು ಬಂಧಿಸಿದ್ದರು. ಅಂತೆಯೇ ಪ್ರಕರಣದ ಮತ್ತೋರ್ವ ಆರೋಪಿ ಹಾಗೂ ಹೋರಾಟಗಾರ ಗೌತಮ್ ನವಲಖ ಅವರನ್ನೂ ಪೊಲೀಸರು ಬಂಧಿಸಲು ಯತ್ನಿಸಿದ್ದರು. ಆದರೆ ದೆಹಲಿ ನ್ಯಾಯಾಲಯ ಅವರ ಬಂಧನಕ್ಕೆ ತಡೆ ನೀಡಿತ್ತು. 
SCROLL FOR NEXT