ದೇಶ

ರಾಫೆಲ್ ಡೀಲ್: ಅಸಮ್ಮತಿ ವರದಿ ತಳ್ಳಿಹಾಕಿದ ಐಎನ್ ಟಿ ಅಧ್ಯಕ್ಷ ಏರ್ ಮಾರ್ಷಲ್ ಭಡೌರಿಯಾ

Lingaraj Badiger
ನವದೆಹಲಿ: ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ಭಾರತೀಯ ಸಮಾಲೋಚನಾ ತಂಡ(ಐಎನ್ ಟಿ)ದ ಅಧ್ಯಕ್ಷ ಏರ್ ಮಾರ್ಷಲ್ ಆರ್ ಕೆ ಎಸ್ ಭಡೌರಿಯಾ ಅವರು, 36 ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ತಾವು ಅಸಮ್ಮತಿ ವ್ಯಕ್ತಪಡಿಸಿರಲಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದ್ದಾರೆ.
ರಾಫೆಲ್ ಡೀಲ್ ಗೆ ಐಎನ್ ಟಿ ಅಸಮ್ಮತಿ ವ್ಯಕ್ತಪಡಿಸಿತ್ತು ಎಂಬ ಮಾಧ್ಯಮ ವರದಿಗೆ ಪ್ರತಿಕ್ರಿಯಿಸಿದ ಭಡೌರಿಯಾ ಅವರು, ಏಳು ಜನರಿದ್ದ ತಂಡದಲ್ಲಿ ಮೂವರು ಕೆಲ ಆಕ್ಷೇಪ ವ್ಯಕ್ತಪಡಿಸಿದ್ದರು, ಆದರೆ, ಅಸಮ್ಮತಿ ವ್ಯಕ್ತಪಡಿಸಿರಲಿಲ್ಲ ಎಂದು ಹೇಳಿದ್ದಾರೆ.
ಆ ಮೂವರು ನೀಡಿದ್ದ ಆಕ್ಷೇಪದ ವಿವರಗಳನ್ನು ಭಾರತೀಯ ಸಮಾಲೋಚನಾ ತಂಡದ ಅಧ್ಯಕ್ಷರಾಗಿದ್ದ ನನಗೆ ನೀಡಲಾಗಿತ್ತು. ಈ ಎಲ್ಲ ವಿಷಯಗಳ ಬಗ್ಗೆ ಹಿಂದೆಯೂ ಚರ್ಚೆ ಮಾಡಲಾಗಿತ್ತು ಮತ್ತು ಅವುಗಳಿಗೆ ಸೂಕ್ತ ಉತ್ತರ ನೀಡಲಾಗಿತ್ತು. ಎಲ್ಲ ಸಂದೇಹಗಳಿಗೆ ಉತ್ತರ ಕಂಡುಕೊಂಡ ನಂತರ ಸಲ್ಲಿಸಲಾದ ಅಂತಿಮ ವರದಿಯಲ್ಲಿ ಯಾವುದೇ ಆಕ್ಷೇಪಗಳೂ ಇರಲಿಲ್ಲ ಎಂದು ಭಡೌರಿಯಾ ಅವರು ಎಎನ್ಐಗೆ ತಿಳಿಸಿದ್ದಾರೆ.
ಐಎನ್ ಟಿ ತಂಡದಲ್ಲಿದ್ದ ಮೂವರು ಎಂಟು ಪುಟಗಳ ಅಸಮ್ಮತಿ ಪತ್ರವನ್ನು ಬರೆದಿದ್ದರು ಎಂಬ ಮಾಧ್ಯಮ ವರದಿಯನ್ನು ಭಡೌರಿಯಾ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಆ ಆಕ್ಷೇಪಗಳನ್ನು ಅಂತಿಮ ವರದಿಯಲ್ಲಿ ಕೂಡ ಸೇರಿಸಲಾಗಿತ್ತು. ಅವುಗಳಿಗೆ ಅನಗತ್ಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
SCROLL FOR NEXT