ನವದೆಹಲಿ: ಕಾಂಗ್ರೆಸ್ ಹೆಚ್ಚು ಕಮ್ಮಿ ಆಪ್ ಜೊತೆ ಮೈತ್ರಿ ಕೈಬಿಟ್ಟಿದೆ ಎಂದು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.
ಇಂದು ವರದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಕಾಂಗ್ರೆಸ್ ವಾಸ್ತವಿಕವಾಗಿ ಆಪ್ ಜತೆ ಮೈತ್ರಿ ಕೈಬಿಟ್ಟಿದೆ ಎಂದರು.
ಕಾಂಗ್ರೆಸ್ ಜತೆ ಮೈತ್ರಿಗೆ ಎಎಪಿ ಹೆಚ್ಚು ಉತ್ಸುಕವಾಗಿತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ದೆಹಲಿ ಸಿಎಂ, ತ್ರಿಕೋನ ಸ್ಫರ್ಧೆಯಾದರೆ ಬಿಜೆಪಿಗೆ ಲಾಭವಾಗಲಿದೆ ಎಂದರು.
ನಿನ್ನೆಯಷ್ಟೇ ದೆಹಲಿಯಲ್ಲಿ ನಡೆದ ಬಿಜೆಪಿ ವಿರೋಧಿ ಬಣದ ನಾಯಕರ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರತಿಪಕ್ಷಗಳ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ನಿವಾಸದಲ್ಲಿ ಈ ಪ್ರತಿಪಕ್ಷಗಳ ಸಭೆಯನ್ನು ಆಯೋಜಿಸಿದ್ದರು.