ದೇಶ

ನೋಟುಗಳ ಅನಾಣ್ಯೀಕರಣದಿಂದ ಮೃತಪಟ್ಟ ಬಗ್ಗೆ ಮಾಹಿತಿಯಿಲ್ಲ; ಪ್ರಧಾನ ಮಂತ್ರಿ ಕಾರ್ಯಾಲಯ

Sumana Upadhyaya

ನವದೆಹಲಿ: ಅಧಿಕ ಮೌಲ್ಯದ ನೋಟುಗಳ ಅನಾಣ್ಯೀಕರಣನದ ನಂತರ ದೇಶದಲ್ಲಿ ನಾಗರಿಕರ ಸಾವಿನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2016ರ ನವೆಂಬರ್ 8ರಂದು ನೋಟುಗಳ ಅನಾಣ್ಯೀಕರಣ ಘೋಷಿಸಿದ್ದರು.

ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಶ್ನೆ ಕೇಳಿ ಅರ್ಜಿ ಹಾಕಿದ ವ್ಯಕ್ತಿ 30 ದಿನಗಳೊಳಗೆ ಅಗತ್ಯ ಮಾಹಿತಿ ನೀಡಿಲ್ಲ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಕೇಂದ್ರ ಮಾಹಿತಿ ಆಯೋಗದ ಮುಂದೆ ತಿಳಿಸಿದ್ದಾರೆ.

ನೋಟುಗಳ ಚಲಾವಣೆ ರದ್ದತಿ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಕಳೆದ ವರ್ಷ ಡಿಸೆಂಬರ್ 18ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಲಭ್ಯವಿರುವ ಮಾಹಿತಿ ಪ್ರಕಾರ, ಮೂವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಮತ್ತು ಒಬ್ಬರು ಗ್ರಾಹಕರು ನೋಟುಗಳ ಅನಾಣ್ಯೀಕರಣಗೊಂಡ ಸಂದರ್ಭದಲ್ಲಿ ಮೃತಪಟ್ಟಿದ್ದರು ಎಂದಿದ್ದರು.

ದೇಶದಲ್ಲಿ ಚಲಾವಣೆಯಲ್ಲಿದ್ದ ಒಟ್ಟು ಹಣದಲ್ಲಿ ಶೇಕಡಾ 86ರಷ್ಟಿದ್ದ 1000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿ ಪ್ರಧಾನಿ ನರೇಂದ್ರ ಮೋದಿ 2016ರ ನವೆಂಬರ್ 8ರಂದು ಆದೇಶ ಹೊರಡಿಸಿದ್ದರು. ಅದರ ಬದಲಾಗಿ ನಂತರ 2 ಸಾವಿರ ಮತ್ತು 500 ರೂಪಾಯಿಯ ಹೊಸ ನೋಟುಗಳು ಚಲಾವಣೆಗೆ ಬಂದವು. ಬ್ಯಾಂಕಿನಿಂದ ಹಣ ಹಿಂಪಡೆಯಲು ನಂತರದ ದಿನಗಳಲ್ಲಿ ಹಲವು ನಿರ್ಬಂಧಗಳನ್ನು ಕೂಡ ಹೇರಲಾಗಿತ್ತು.

ನೋಟುಗಳ ಚಲಾವಣೆ ರದ್ದತಿಯಿಂದ ಉಂಟಾದ ತೊಂದರೆಯಿಂದ ಜನರು ಮೃತಪಟ್ಟಿದ್ದಾರೆ. ಎಷ್ಟು ಜನ ಮೃತಪಟ್ಟಿದ್ದಾರೆ ಎಂದು ಕೇಳಿ ಆರ್ ಟಿಐ ಕಾರ್ಯಕರ್ತ ನೀರಜ್ ಶರ್ಮಾ ಪ್ರಧಾನ ಮಂತ್ರಿ ಕಚೇರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

SCROLL FOR NEXT