ದೇಶ

ಪಾಕಿಸ್ತಾನಕ್ಕೆ ಜಾಗತಿಕವಾಗಿ ಬುದ್ಧಿ ಕಲಿಸಲು ಸದ್ದಿಲ್ಲದೇ ಮದ್ದರೆಯುತ್ತಿದೆ ಭಾರತ: ಮುಂದಿದೆ ಮಾರಿ ಹಬ್ಬ!

Srinivas Rao BV
ನವದೆಹಲಿ: ಭಯೋತ್ಪಾದನೆಯನ್ನು ಬೆಂಬಲಿಸುವ ತನ್ನ ಚಾಳಿಯನ್ನು ಬಿಡದ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಒಬ್ಬಂಟಿಯನ್ನಾಗಿ ಮಾಡಬೇಕೆಂದು ಪ್ರಧಾನಿ ಮೋದಿ ಪದೇ ಪದೇ ಹೇಳುತ್ತಿದ್ದರು. ಈ ವರೆಗೂ ಭಾರತ ಸರ್ಕಾರ ಅದನ್ನು ಮಾಡುವಲ್ಲಿ ಒಂದಷ್ಟು ಯಶಸ್ಸಸ್ಸುಗಳಿಸಿದೆ. ಈಗ ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರ ಪಾಕ್ ನ್ನು ಒಂಟಿಯನ್ನಾಗಿಸುವುದಕ್ಕೆ ಮತ್ತಷ್ಟು ತೀವ್ರವಾದ ಪ್ರಯತ್ನ ಮುಂದುವರೆಸಿದೆ.
ಪುಲ್ವಾಮ ಘಟನೆಯಾದ ಬೆನ್ನಲ್ಲೇ ಪಾಕ್ ಗೆ ಕಠಿಣ ಸಂದೇಶ ರವಾನೆ ಮಾಡಿರುವ ಭಾರತ ಈಗ ಸದ್ದಿಲ್ಲದೇ ಪಾಕಿಸ್ತಾನಕ್ಕೆ ಮದ್ದು ಅರೆಯುತ್ತಿದೆ. 
ರಾಜತಾಂತ್ರಿಕ ನಡೆಯ ಮೂಲಕ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯನ್ನಾಗಿ ಮಾಡುವುದಕ್ಕೆ ಸಾಧ್ಯವಿರುವ ಎಲ್ಲಾ ಅಸ್ತ್ರಗಳನ್ನೂ ಭಾರತ ಪ್ರಯೋಗಿಸುತ್ತಿದ್ದು ಪಿ-5 (ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವ ಹೊಂದಿರುವ ರಾಷ್ಟ್ರಗಳು) ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಪುಲ್ವಾಮ ದಾಳಿ ಪಾಕಿಸ್ತಾನ ಬೆಂಬಲಿತ, ಪ್ರೇರಿತ ಉಗ್ರ ಸಂಘಟನೆಯ ಕೃತ್ಯ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ. 
ಚೀನಾ, ಜಪಾನ್, ಅಮೆರಿಕ, ಯುರೋಪಿಯನ್ ಯೂನಿಯನ್, ಜರ್ಮನಿ, ದಕ್ಷಿಣ ಕೋರಿಯಾ, ಇಸ್ರೇಲ್, ರಷ್ಯಾ, ಬ್ರಿಟನ್, ಕೆನಡಾ, ಫ್ರಾನ್ಸ್, ಸ್ಪೇನ್, ಭೂತಾನ್, ನೆರೆ ರಾಷ್ಟ್ರಗಳಾದ ಬಾಂಗ್ಲಾ, ಶ್ರೀಲಂಕಾ, ಅಫ್ಘಾನಿಸ್ಥಾನ, ನೇಪಾಳ ಸೇರಿದಂತೆ 25 ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಭಾರತದ ವಿದೇಶಾಂಗ ಇಲಾಖೆ ಮಾತನಾಡಿದೆ. ಜಗತ್ತಿನ ಪ್ರಬಲ ರಾಷ್ಟ್ರಗಳ ಪ್ರತಿನಿಧಿಗಳೆದುರು ಪುಲ್ವಾಮ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವುದನ್ನು ಭಾರತದ ವಿದೇಶಾಂಗ ಕಾರ್ಯದರ್ಶಿಗಳಾದ  ವಿಜಯ್ ಗೋಯಲ್ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ ಅಷ್ಟೇ ಅಲ್ಲದೇ ಪಾಕ್ ಕೃತ್ಯದ ಬಗ್ಗೆ ಎಲ್ಲಾ ಪ್ರತಿನಿಧಿಗಳಿಗೂ ಸ್ಪಷ್ಟವಾಗಿ ಮನವರಿಕೆಯಾಗಿದ್ದು, ಭಾರತದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂಧಿಸಲಿವೆ ಎಂಬ ವಿಶ್ವಾಸ ಮೂಡಿದೆ. 
ಜಗತ್ತಿನ ಪ್ರಬಲ ರಾಷ್ಟ್ರಗಳೆದುರು ಭಾರತ ಪಾಕ್ ಕೃತ್ಯವನ್ನು ಮನವರಿಕೆ ಮಾಡಿರುವುದರಿಂದ, ಈಗಾಗಲೇ ಆರ್ಥಿಕ ಮುಗ್ಗಟ್ಟಿನಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗುವುದು ನಿಚ್ಚಳವಾಗಿದೆ. 
SCROLL FOR NEXT