ದೇಶ

ನಿರುದ್ಯೋಗ ಹೆಚ್ಚಳ ಆಶಾವಾದಿ ಯುವಕರನ್ನು ಪ್ರಕ್ಷುಬ್ಧಗೊಳಿಸಿದೆ: ಮನಮೋಹನ್ ಸಿಂಗ್

Srinivas Rao BV
ನವದೆಹಲಿ: ನಿರುದ್ಯೋಗ ಹೆಚ್ಚಳ, ಗ್ರಾಮೀಣ ಋಣಭಾರ ಆಶಾವಾದಿ ಯುವಕರನ್ನು ಪ್ರಕ್ಷುಬ್ಧಗೊಳಿಸಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 
ದೇಶದ ಆರ್ಥಿಕತೆಯನ್ನು ಸಮರ್ಥವಾಗಿ ಮೇಲೆತ್ತುವುದಕ್ಕೆ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮನಮೋಹನ್ ಸಿಂಗ್ ಆರೋಪಿಸಿದ್ದಾರೆ. 
ಫೆ.17 ರಂದು ನಡೆದ ಡೆಲ್ಲಿ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನ ಘಟಿಕೋತ್ಸವದಲ್ಲಿ ಮಾತನಾಡಿರುವ ಮನಮೋಹನ್ ಸಿಂಗ್,  ದೇಶದಲ್ಲಿರುವ ಆಂತರಿಕ ಸಮಸ್ಯೆಗಳು ಆರ್ಥಿಕತೆಯನ್ನು ಕುಗ್ಗಿಸುತ್ತಿದ್ದು ಅದು ಸಮಾಜದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. 
ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳು, ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಆರ್ಥಿಕ ಅವಕಾಶಗಳು, ಎಲ್ಲಕ್ಕಿಂತ ಮಿಗಿಲಾಗಿ ಸಮಾಜ ಭಂಜಕ ಶಕ್ತಿಗಳು ಸಕ್ರಿಯವಾಗಿದ್ದು ದೇಶದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ನಿಲ್ಲದ ಕೃಷಿಕರ ಆತ್ಮಹತ್ಯೆ, ನಮ್ಮ ಆರ್ಥಿಕತೆಯ  ಅಸಮತೋಲನವನ್ನು ಪ್ರತಿಬಿಂಬಿಸುತ್ತಿದೆ. ಇದನ್ನು ಆಳವಾದ ಅಧ್ಯಯನ ಹಾಗೂ ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಪರಿಹರಿಸಲು ಸಾಧ್ಯ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಿಂಗ್, ಕೈಗಾರಿಕಾ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗಿಲ್ಲ, ಪರಿಣಾಮ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.  
ಉದ್ಯೋಗ ಕ್ಷೇತ್ರಕ್ಕೆ ಹೆಚ್ಚು ನೆರವಾಗುತ್ತಿದ್ದ ಸಣ್ಣ ಮತ್ತು ಅಸಂಘಟಿತ ಕ್ಷೇತ್ರಗಳು ನೋಟು ನಿಷೇಧ, ಜಿಎಸ್ ಟಿ ಜಾರಿಯಿಂದಾಗಿ ತತ್ತರಿಸಿವೆ ಎಂದು ಮನಮೋಹನ್ ಸಿಂಗ್ ಆರೋಪಿಸಿದ್ದಾರೆ. 
SCROLL FOR NEXT