ಚಂಡೀಗಢ: ಪಾಕಿಸ್ತಾನಕ್ಕೆ ತೆರಳುತ್ತಿದ್ದ ಕಾಶ್ಮೀರಿ ವಿದ್ಯಾರ್ಥಿಯನ್ನು ಪಂಜಾಬ್ ಪೊಲೀಸರು ಅತ್ತಾರಿ ಗಡಿಭಾಗದಲ್ಲಿ ಬಂಧಿಸಿದ್ದಾರೆ.
ದೇಶ ವಿರೋಧಿ ಚಟುವಟಿಕೆ ಮೇಲೆ ಕಾಶ್ಮೀರದ ಮತ್ತಿಬ್ಬರು ವಿದ್ಯಾರ್ಥಿಗಳನ್ನು ಹಿಮಾಚಲ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಶ್ರೀನಗರದಲ್ಲಿ ತೆಹ್ಸೀಮ್ ಅಹ್ಮದ್ ಅಲಿಯಾಸ್ ಜುನೈದ್ ನನ್ನು ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳ ಜೊತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿದೆ. ಈತ ಕೊಲೆ ಕೇಸಿನಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ. ಆತನ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದರು. ತೆಹ್ಸೀಮ್ ಹಿಜ್ ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದ.
ಆತನ ಬಳಿ ಸಾಕಷ್ಟು ಲಗ್ಗೇಜುಗಳಿಲ್ಲದ ಕಾರಣ ಪೊಲೀಸರಿಗೆ ಸಂಶಯ ಬಂದು ತಡೆದು ಪ್ರಶ್ನೆ ಮಾಡಿದ್ದಾರೆ. ಆತನ ಪಾಸ್ ಪೋರ್ಟನ್ನು ವಶಕ್ಕೆ ಪಡೆಯಲಾಗಿದೆ.
ಈ ಮಧ್ಯೆ, ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಹಿಮಾಚಲ ಪ್ರದೇಶದ ಸೊಲನ್ ನಲ್ಲಿ ಮೊನ್ನೆ ಭಾನುವಾರ ಇಬ್ಬರು ಕಾಶ್ಮೀರಿ ವಿದ್ಯಾರ್ಥಿಗಳಾದ ಪಿರ್ಜಡಾ ಟಾವಿಶ್ ಫಯಾಜ್ ಮತ್ತು ಆಕಿಬ್ ರಸೂಲ್ ನನ್ನು ಬಂಧಿಸಲಾಗಿದೆ. ಇವರು ಸೊಲನ್ ಜಿಲ್ಲೆಯ ಡಾ ಯಶವಂತ್ ಸಿಂಗ್ ಪಾರ್ಮರ್ ತೋಟಗಾರಿಕಾ ವಿಶ್ವವಿದ್ಯಾಲಯ ಮತ್ತು ನೌಮಿ ಅರಣ್ಯಶಾಸ್ತ್ರ ವಿ.ವಿಯಲ್ಲಿ ಅಧ್ಯಯನ ಮಾಡುತ್ತಿದ್ದರು.
ಅದೇ ಗ್ರಾಮದ ನೀರಜ್ ಭಾರದ್ವಾಜ್ ಎಂಬಾತ ನೀಡಿದ ದೂರಿನ ಮೇಲೆ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ. ಫೇಸ್ ಬುಕ್ ಪುಟದಲ್ಲಿ ದೇಶ ವಿರೋಧಿ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿತ್ತು.