ದೇಶ

ಬಿಎಸ್ ಪಿ-ಎಸ್ ಪಿ ಮೈತ್ರಿಗೆ ಮುಲಾಯಂ ಕಿಡಿ: ರಹಸ್ಯ ಪತ್ರ ಕಳಿಸಲು ಟಿಕೆಟ್ ಆಕಾಂಕ್ಷಿಗಳಿಗೆ ಕರೆ

Srinivas Rao BV
ಲಖನೌ: ಲೋಕಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷವು ಉತ್ತರಪ್ರದೇಶದಲ್ಲಿ ಬಿರುಸಿನ ಚಟುವಟಿಕೆಯಲ್ಲಿ ತೊಡಗಿರುವಾಗ, ಬಹುಜನ ಸಮಾಜವಾದಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ, ಪುತ್ರ ಅಖಿಲೇಶ್ ಯಾದವ್ ವಿರುದ್ಧ ಮುಲಾಯಂ ಸಿಂಗ್ ಯಾದವ್ ಹರಿಹಾಯ್ದಿದ್ದಾರೆ.
“ರಾಜ್ಯದ 80 ಲೋಕಸಭಾ ಸ್ಥಾನಗಳಲ್ಲಿ ಕೇವಲ 40ರಲ್ಲಿ ಮಾತ್ರ ಎಸ್‍ಪಿ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದಾರೆ.  ಅಲ್ಲದೆ ಇನ್ನೂ ಅಭ್ಯರ್ಥಿಗಳ ಪಟ್ಟಿ ಇತ್ಯರ್ಥವಾಗಿಲ್ಲ. ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದೆ” ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಮ್ಮ ನಾಯಕತ್ವದಲ್ಲಿ ಸಮಾಜವಾದಿ ಪಕ್ಷ 39 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.  ನಂತರದ ಉಪ ಚುನಾವಣೆಯಲ್ಲಿ 3 ಸ್ಥಾನ ಲಭಿಸಿತ್ತು. ಇದೀಗ ಬಿಎಸ್‍ಪಿ ಮೈತ್ರಿಯಿಂದಾಗಿ ಚುನಾವಣೆಗೂ ಮುನ್ನವೇ ಒಟ್ಟು ಕ್ಷೇತ್ರಗಳಲ್ಲಿನ ಅರ್ಧ ಸ್ಥಾನಗಳು ಕೈತಪ್ಪಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಬಿಜೆಪಿಯನ್ನು ಮಣಿಸಿ ಬಹುಮತದ ಗೆಲುವು ಸಾಧಿಸಲು ಸಮಾಜವಾದಿ ಪಕ್ಷದ ಕಾರ್ಯಕರ್ತರು ಸಿದ್ಧರಾಗಬೇಕು. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಖಚಿತ.  ಒಂದು ವೇಳೆ ಯಾವುದೇ ಅನುಮಾನವಿದ್ದಲ್ಲಿ. ಚುನಾವಣೆಗೆ ಸ್ಪರ್ಧಿಸುವ ಆಸಕ್ತಿಯಿದ್ದಲ್ಲಿ ರಹಸ್ಯ ಪತ್ರ ರವಾನಿಸಬಹುದು”ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೂ ಪ್ರಧಾನಿಯಾಗಲೆಂದು ಹಾರೈಸಿರುವ ಮುಲಾಯಂ, ಸಮಾಜವಾದಿ ಪಕ್ಷದ ವರಿಷ್ಠನಾಗಿದ್ದರೂ ತಮಗೆ ಯಾವುದೇ ಜವಾಬ್ದಾರಿ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
“ದುರಾದೃಷ್ಟವಶಾತ್ ಪಕ್ಷದಿಂದ ನನಗೆ ಯಾವುದೇ ಹೊಣೆಗಾರಿಕೆ ನೀಡಿಲ್ಲ. ಆದಾಗ್ಯೂ  ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಬಹುದಾದ ಎಲ್ಲ ಅಧಿಕಾರವನ್ನೂ ಹೊಂದಿರುವೆ” ಎಂದು ಹೇಳಿಕೊಂಡಿದ್ದಾರೆ.
SCROLL FOR NEXT