ಪುಲ್ವಾಮ ದಾಳಿಯ ಎಫೆಕ್ಟ್: ಸೈನಿಕರಿಗೆ ವಾಣಿಜ್ಯ ವಿಮಾನಗಳಲ್ಲಿ ಸಂಚರಿಸಲು ಅನುಮತಿ
ನವದೆಹಲಿ: ಪುಲ್ವಾಮದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಯೋಧರಿಗೆ ಹೆಚ್ಚುವರಿಯಾಗಿ ಕೆಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ರಜೆ ಹಾಕಿ ಊರಿಗೆ ವಾಪಸ್ಸಾಗುವಾಗ ಹಾಗೂ ಕರ್ತವ್ಯಕ್ಕೆ ಮರಳುವಾಗ ವಾಣಿಜ್ಯ ವಿಮಾನಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ.
ದೆಹಲಿ-ಶ್ರೀನಗರ, ಶ್ರೀನಗರ-ದೆಹಲಿ, ಜಮ್ಮು-ಶ್ರೀನಗರ, ಶ್ರೀನಗರ-ಜಮ್ಮು ಮಾರ್ಗದ ಸೆಕ್ಟರ್ ಗಳಿಗೆ ವಿಮಾನದಲ್ಲಿ ಸಂಚರಿಸಲು ಸಿಆರ್ ಪಿಎಫ್ ನ ಎಲ್ಲಾ ಸಿಬ್ಬಂದಿಗಳಿಗೂ ಅರ್ಹತೆಯನ್ನು ಅನುಮತಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಕೃತ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ತೀರ್ಮಾನದಿಂದಾಗಿ ತಕ್ಷಣಕ್ಕೆ, ಪೇದೆ, ಮುಖ್ಯಪೇದೆ, ಸಹಾಯಕ ಸಬ್-ಇನ್ಸ್ ಪೆಕ್ಟರ್ ಸೇರಿದಂತೆ ವಿವಿಧ ಶ್ರೇಣಿಗಳಲ್ಲಿರುವ ಒಟ್ಟಾರೆ 7.8 ಲಕ್ಷ ಸಿಆರ್ ಪಿಎಫ್ ಸಿಬ್ಬಂದಿಗಳು ಆದೇಶದಿಂದ ಪ್ರಯೋಜನ ಪಡೆಯಲಿದ್ದಾರೆ. ಇದಕ್ಕೂ ಮುನ್ನ ಸಿಆರ್ ಪಿಎಫ್ ಯೋಧರಿಗೆ ರಜೆಗೆ ತೆರಳುವಾಗ ಹಾಗೂ ಕರ್ತವ್ಯಕ್ಕೆ ಹಾಜರಾಗುವಾಗ ವಾಣಿಜ್ಯ ವಿಮಾನಗಳಲ್ಲಿ ಸಂಚರಿಸುವ ಸೌಲಭ್ಯ ಇರಲಿಲ್ಲ.
ಪ್ರಸ್ತುತ ಸಿಆರ್ ಪಿಎಫ್ ಯೋಧರಿಗೆ ಏರ್ ಕೊರಿಯರ್ ಸೇವೆ ಲಭ್ಯವಿದ್ದು, ಇಡೀ ಸಿಆರ್ ಪಿಎಫ್ ತಂಡಕ್ಕಾಗಿ ದೆಹಲಿ ಅಥವಾ ಜಮ್ಮುವಿನಿಂದ ಶ್ರೀನಗರಕ್ಕೆ ಹಾಗೂ ಅಲ್ಲಿಂದ ವಾಪಸ್ ಸಂಚರಿಸುವುದಕ್ಕೆ ಇಡೀ ಒಂದು ವಿಮಾನವನ್ನು ಕಾಯ್ದಿರಿಸಲಾಗಿರುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಆದೇಶದಿಂದ ಈ ನಿಯಮಗಳು ವಿಸ್ತರಣೆಯಾಗಿದ್ದು, ಯೋಧರು ಹಾಗೂ ಅಧಿಕಾರಿಗಳು ಇನ್ನು ಮುಂದಿನ ದಿನಗಳಲ್ಲಿ ವಾಣಿಜ್ಯ ವಿಮಾನಗಳಲ್ಲಿ ಸಂಚರಿಸಿ ಅದರ ವೆಚ್ಚವನ್ನು ಸಿಆರ್ ಪಿಎಫ್ ನಿಂದ ಮರಳಿ ಪಡೆಯಬಹುದಾಗಿದೆ.