ನವದೆಹಲಿ: ಮುಂಬೈ - ಅಹಮದಾಬಾದ್ ನಡುವೆ ಸಂಚರಿಸಲಿರುವ ಭಾರತದ ಮೊದಲ ಬುಲೆಟ್ ಟ್ರೈನ್ಗೆ ಸೂಕ್ತ ಹೆಸರು ಸೂಚಿಸಿ ನಗದು ಬಹುಮಾನ ಪಡೆಯುವಂತೆ ಕೇಂದ್ರ ಸರ್ಕಾರ ದೇಶದ ಜನತೆಗೆ ಮುಕ್ತ ಆಹ್ವಾನ ನೀಡಿದೆ.
ಮಾರ್ಚ್ 25ರೊಳಗೆ ಬುಲೆಟ್ ರೈಲಿಗೆ ಹೆಸರು ಮತ್ತು ಮಾಸ್ಕಟ್ ಡಿಸೈನ್ ಅನ್ನು ನೀಡುವಂತೆ ಹಾಗೂ ಆಯ್ಕೆಯಾದ ಹೆಸರು ಸೂಚಿಸಿದವರಿಗೆ ಮತ್ತು ಮಾಸ್ಕಟ್ ಡಿಸೈನ್ ಮಾಡಿದವರಿಗೆ 1 ಲಕ್ಷ ರುಪಾಯಿ ನಗದು ಪುರಸ್ಕಾರ ನೀಡುವುದಾಗಿ ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಚ್ಎಸ್ಆರ್ಸಿಎಲ್) ತಿಳಿಸಿದೆ.
ಹೆಸರು ಸೂಚಿಸುವವರು ಕೇಂದ್ರ ಸರ್ಕಾರದ mygov.in ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಸಲಹೆಯನ್ನು ನೀಡಬಹುದು. ಮಾಸ್ಕಟ್ ಡಿಸೈನ್ ಮಾಡುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1 ಲಕ್ಷ ರೂ. ಮತ್ತು ಹೆಸರು ಸೂಚಿಸುವ ಸ್ಪರ್ಧೆಯಲ್ಲಿ ಗೆದ್ದವರಿಗೆ 50 ಸಾವಿರ ರೂ ಬಹುಮಾನ ಸಿಗಲಿದೆ. ಜತೆಗೆ ಈ ಎರಡೂ ವಿಭಾಗದಲ್ಲಿ ತಲಾ 10 ಮತ್ತು 5 ಸಾವಿರದ ಸಮಾಧಾನಕರ ಬಹುಮಾನವೂ ದೊರೆಯಲಿದೆ.
2017ರಲ್ಲಿ ಇದೇ ವಿಧದ ಸ್ಪರ್ಧೆಯನ್ನು ಆಯೋಜಿಸಿ ಬುಲೆಟ್ ರೈಲಿನ ಲೋಗೋವನ್ನು ಆಯ್ಕೆ ಮಾಡಲಾಗಿತ್ತು.