ತಿರುನೆಲ್ವೆಲಿ: ನನ್ನ ಪಕ್ಷ ತಮಿಳುನಾಡಿನ 'ಎ' ಟೀಮ್, ಬಿಜೆಪಿಯ 'ಬಿ' ಟೀಮ್ ಅಲ್ಲ ಎಂದು ಮಕ್ಕಳ್ ನೀಧೀ ಮಯ್ಯಂ(ಎಂಎನ್ಎಂ) ಮುಖ್ಯಸ್ಥ ಕಮಲ್ ಹಾಸನ್ ಅವರು ಡಿಎಂಕೆ ಆರೋಪ ತಿರುಗೇಟು ನೀಡಿದ್ದಾರೆ.
ನಿನ್ನೆ ತಡ ರಾತ್ರಿ ತಿರುನೆಲ್ವೆಲಿಯಲ್ಲಿ ಪಕ್ಷದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್ ಅವರು, ತಮ್ಮ ಪಕ್ಷ ಬಿಜೆಪಿಯ ಬಿ ಟೀಮ್ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.
ನಮ್ಮ ಪಕ್ಷವನ್ನು ಡಿಎಂಕೆ ಬಿಜೆಪಿ ಬಿ ಟೀಮ್ ಎಂದು ಸಂಬೋದಿಸಿದೆ. ನಮ್ಮದು ಪಕ್ಷವೇ ಹೊರತು ಯಾವುದೇ ಪಕ್ಷಕ್ಕೂ ನಾವು ಬಿ ಟೀಮ್ ಅಲ್ಲ ಎಂದು ಕಮಲ್ ಹಾಸನ್ ಖಡಕ್ಕಾಗಿ ಹೇಳಿದ್ದಾರೆ.
ನಮ್ಮ ಪಕ್ಷದ ಬೆಳವಣಿಗೆಯನ್ನು ಕೆಲವು ಕಿಡಿಗೇಡಿಗಳು ಸಹಿಸುತ್ತಿಲ್ಲ. ನಾವು ಜನರ ಮಧ್ಯೆ ಹೋಗಿ ಉತ್ತಮ ಕೆಲಸ ಮಾಡುತ್ತಿದ್ದೇವೆ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿಯೇ ಬಿಜೆಪಿ ಬಿ ಟೀಮ್ ಎಂದು ಆರೋಪಿಸುತ್ತಿದ್ದಾರೆ. ನಮ್ಮದು ತಮಿಳುನಾಡಿದ ಎ ಟೀಮ್ ಪಕ್ಷವೇ ಹೊರತು ಯಾವುದರ ಬಿ ಟೀಮ್ ಅಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಹಾಘಟ್ಬಂಧನ್ ವಿರುದ್ಧವೂ ವಾಗ್ದಾಳಿ ನಡೆಸಿದ, ನಟ, ರಾಜಕಾರಣಿ ಕಮಲ್ ಹಾಸನ್ ಅವರು, ಲೋಕಸಭೆ ಚುನಾವಣೆ ಗೆಲ್ಲುವ ಸಲುವಾಗಿ ಪ್ರತಿಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಒಂದು ವೇಳೆ ತಮ್ಮ ವಿರೋಧಿ ಪಕ್ಷ ಗೆದ್ದಲ್ಲಿ ಮತ್ತೆ ಮೊದಲಿನಂತೆ ಆಗುತ್ತಾರೆ. ನಮ್ಮದು ಅಂತಹ ಪಕ್ಷವಲ್ಲ. ನಮ್ಮಲ್ಲಿ ಕುದುರೆ ವ್ಯಾಪರಕ್ಕೆ ಯಾವುದೇ ಅವಕಾಶವಿಲ್ಲ. ನಾವು ಸೋಲು-ಗೆಲುವಿನ ನಡುವೆಯೂ ಒಂದೇ ನಿಲುವನ್ನು ತಾಳುತ್ತೇವೆ ಎಂದು ಕಾಂಗ್ರೆಸ್-ಡಿಎಂಕೆ ನೇತೃತ್ವದ ಮಹಾಘಟ್ಬಂಧನ್ ವಿರುದ್ಧ ಕಿಡಿಕಾರಿದರು.