ದೇಶ

ಆಸ್ತಿ ವಿವರ ಸಲ್ಲಿಸದೆ ಬಾಕಿ ಉಳಿಸಿಕೊಂಡಿರುವ 300ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು!

Sumana Upadhyaya
ನವದೆಹಲಿ: 2018ನೇ ಸಾಲಿನಲ್ಲಿ ಸ್ಥಿರ ಆಸ್ತಿ ತೆರಿಗೆ ವಿವರ ಸಲ್ಲಿಸದೆ ದೇಶದ ಸುಮಾರು 340ಕ್ಕೂ ಅಧಿಕ ಐಎಎಸ್ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಬಹಿರಂಗಪಡಿಸಿರುವ ಪತ್ರದಿಂದ ತಿಳಿದುಬಂದಿದೆ.
ಕಳೆದ ಕೆಲ ತಿಂಗಳಿನಿಂದ ಇಲಾಖೆ ಈ ಸಂಬಂಧ ಅಧಿಕಾರಿಗಳಿಗೆ ಪದೇ ಪದೇ ಜ್ಞಾಪನಾ ಪತ್ರ ಕಳುಹಿಸುತ್ತಿದ್ದರೂ ಕೂಡ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ. ಪತ್ರವನ್ನು ಎಲ್ಲಾ ರಾಜ್ಯಗಳ ಇಲಾಖೆಗಳಿಗೆ ನೀಡಲಾಗಿದೆ. ಆಸ್ತಿ ವಿವರಗಳನ್ನು ಸಲ್ಲಿಸಲು ವಿಫಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಳೆದ ಫೆಬ್ರವರಿ 7ರಂದು ಅಧಿಕಾರಿಗಳಿಗೆ ಕಳುಹಿಸಿರುವ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಐಎಎಸ್ ಅಧಿಕಾರಿಗಳು 2018ನೇ ಸಾಲಿನ ತಮ್ಮ ಸ್ಥಿರ ಆಸ್ತಿಗಳ ತೆರಿಗೆಯನ್ನು ಈ ವರ್ಷ ಜನವರಿ 31ರೊಳಗೆ ಸಲ್ಲಿಸಬೇಕಾಗಿತ್ತು. ಒಂದು ವೇಳೆ ತೆರಿಗೆ ವಿವರಗಳನ್ನು ಸಲ್ಲಿಸದಿದ್ದರೆ ಐಎಎಸ್ ಕ್ಯಾಡರ್ ನಿಯಮಗಳ ಅಡಿಯಲ್ಲಿ ನಿಯೋಜನೆ, ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕಾರಿಗಳ ನೇಮಕ, ತರಬೇತಿ ಕಾರ್ಯಕ್ರಮಗಳಿಗೆ ನಿಯೋಜನೆ (ಕಡ್ಡಾಯ ತರಬೇತಿ ಹೊರತುಪಡಿಸಿ), ಅಕಾಲಿಕ ವಾಪಸಾತಿ ಸೇರಿದಂತೆ ಕೇಂದ್ರ ಸರಕಾರದ ಅನುಮತಿ ಅಗತ್ಯವಿರುವ ಯಾವುದೇ ನಿಯೋಜನೆಯನ್ನು ನಿರಾಕರಿಸಲಾಗುತ್ತದೆ ಎಂದು ಸಿಬ್ಬಂದಿ ಇಲಾಖೆ ಹೊರಡಿಸಿರುವ ಪತ್ರದಲ್ಲಿ ಹೇಳಿದೆ.
SCROLL FOR NEXT