ಸರ್ಜಿಕಲ್ ಸ್ಟ್ರೈಕ್ 2.0ನಲ್ಲಿ ಪ್ರಮುಖ ಪಾತ್ರವಹಿಸಿದ ನೇತ್ರಾ, ಹೆರಾನ್ ಡ್ರೋಣ್ ಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತೀಯ ವಾಯುಸೇನೆಯ ಈ ಪ್ರತೀಕಾರಕ್ಕೆ ಬ್ಲೂ ಪ್ರಿಂಟ್ ಸಿದ್ಧ ಪಡಿಸಲು ಭಾರತೀಯ ವಾಯು ಸೇನೆಯ ಎರಡು ಡ್ರೋಣ್ ಗಳು ನೆರವಾಗಿತ್ತು ಎಂಬ ಅಚ್ಚರಿ ಅಂಶ ತಿಳಿದಿದೆಯೇ..?
ನವದೆಹಲಿ: ಇಡೀ ದೇಶ ಇದೀಗ ಭಾರತೀಯ ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್ 2.0 (ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ವಾಯುಸೇನೆ ದಾಳಿ) ಕುರಿತು ಭಾರಿ ಸಂತಸದಲ್ಲಿದೆ. ಆದರೆ ಈ ಪ್ರತೀಕಾರಕ್ಕೆ ಬ್ಲೂ ಪ್ರಿಂಟ್ ಸಿದ್ಧ ಪಡಿಸಲು ಭಾರತೀಯ ವಾಯು ಸೇನೆಯ ಎರಡು ಡ್ರೋಣ್ ಗಳು ನೆರವಾಗಿತ್ತು ಎಂಬ ಅಚ್ಚರಿ ಅಂಶ ತಿಳಿದಿದೆಯೇ..?
ಹೌದು.. ಗಡಿ ನಿಯಂತ್ರಣಾ ರೇಖೆಯ ಬಳಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ಭಾರತದ ವಾಯು ಸೇನೆ ಇಂದು ಮುಂಜಾನೆ ದಾಳಿ ಮಾಡುತ್ತಿದ್ದಾಗ, 'ಐ ಇನ್ ದಿ ಸ್ಕೈ' ಎಂದೇ ಖ್ಯಾತವಾಗಿರುವ ಎರಡು ಡ್ರೋಣ್ ಗಳು ಪ್ರಮುಖ ಪಾತ್ರ ವಹಿಸಿವೆ. ಒಂದು, ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಓ) ದೇಶೀಯವಾಗಿ ನಿರ್ಮಿಸಿರುವ 'ನೇತ್ರಾ' ಎಂಬ ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಂ, ಮತ್ತು ಎರಡನೇಯದು, ಇಸ್ರೇಲ್ ನಿರ್ಮಿತ ಹೆರಾನ್ ಎಂಬ ಡ್ರೋಣ್. ಇವೆರೆಡರ ಸಹಾಯದಿಂದ ಭಾರತೀಯ ವಾಯು ಸೇನೆ ಯಶಸ್ವಿಯಾಗಿ ಮತ್ತು ಯಾವುದೇ ಪ್ರತಿದಾಳಿಗೆ ಅವಕಾಶವಿಲ್ಲದಂತೆ ದಾಳಿ ಮಾಡಿ ವಾಪಸ್ ಬಂದಿದೆ.
ಪಾಕ್ ವಾಯು ಸೇನೆ ಮೇಲೆ ನಿರಂತರ ಕಣ್ಣಿಟ್ಟಿದ್ದ ಡ್ರೋಣ್ ಗಳು
ನೇತ್ರಾ ಮತ್ತು ಹೆರಾನ್ ಡ್ರೋಣ್ ಗಳು ಪಾಕಿಸ್ತಾನದ ಏರ್ಫೋರ್ಸ್ ಜೆಟ್ ವಿಮಾನಗಳ ಚಲನವಲನಗಳ ಮೇಲೆ ಮತ್ತು ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನಕ್ಕೆ ಸೇರಿದ ಆ್ಯಂಟಿ-ಏರ್ ಕ್ರಾಫ್ಟ್ ರಾಡಾರ್ ಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದವು. ಇವೆರಡರಿಂದ ಸತತವಾಗಿ ವಾಯು ಸೇನೆಗೆ ಸಂದೇಶಗಳು ರವಾನೆಯಾಗುತ್ತಲೇ ಇದ್ದವು. ಇದರಲ್ಲಿ ಹೆರಾನ್ ಡ್ರೋಣ್, ಮಧ್ಯಮ ಎತ್ತರದಲ್ಲಿ ಹಾರುವ, ದೂರ ದೃಷ್ಟಿಯ ಮಾನವರಹಿತ ವೈಮಾನಿಕ ವಾಹನವಾಗಿದ್ದು, ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀಸ್ ನ ಮಲತ್ ವಿಭಾಗ ಈ ಡ್ರೋಣ್ ಅನ್ನು ಅಭಿವೃದ್ಧಿಪಡಿಸಿದೆ. ಇದು 10.5 ಕಿ.ಮೀ. ಎತ್ತರದಲ್ಲಿ 52 ಗಂಟೆಗಳ ಕಾಲ ಸತತವಾಗಿ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಭೂಮಿಯ ಮೇಲಿಂದ ಕೇಂದ್ರದಿಂದ ಸಂಪರ್ಕ ಕಡಿತಗೊಂಡರೆ ತಾನಾಗಿಯೇ ಭೂಮಿಗಿಳಿಯುವ ವ್ಯವಸ್ಥೆ ಕೂಡ ಇದರಲ್ಲಿದೆ. ಮತ್ತು ಇದು ಯಾವುದೇ ಪ್ರತಿಕೂಲ ವಾತಾವರಣವಿದ್ದರೂ ಸಮರ್ಥವಾಗಿ ಕೆಲಸ ನಿರ್ವಹಿಸುತ್ತದೆ.
ಅಂತೆಯೇ ಸೆಂಟರ್ ಫಾರ್ ಏರ್ ಬಾರ್ನ್ ಸಿಸ್ಟೆಂಟ್ಸ್ ಸಹಯೋಗದೊಂದಿಗೆ ಡಿಆರ್‌ಡಿಓ ನಿರ್ಮಿಸಿರುವ 'ನೇತ್ರಾ', ಇತರ ದೇಶಗಳ ಏರ್ಫೋರ್ಸ್ ನ ಜೆಟ್ ವಿಮಾನಗಳ ಮೇಲೆ ಕಣ್ಣಿಟ್ಟಿರುತ್ತದೆ ಮತ್ತು ಚಲನವಲನ ಕಂಡುಬಂದರೆ ಮೊದಲೇ ಸೂಚನೆ ರವಾನಿಸುವ ವ್ಯವಸ್ಥೆ ಹೊಂದಿದೆ. ಆನ್-ಬೋರ್ಡ್ ಸೆನ್ಸಾರ್ ಗಳ ಮೂಲಕ ಪ್ರತಿದಾಳಿ ಆಗುವ ಸಂಭವನೀಯತೆ ಇದ್ದರೆ ಅದನ್ನು ಮೊದಲೇ ರವಾನಿಸುತ್ತದೆ.
ಈ ಎರಡು ಡ್ರೋಣ್ ಗಳ ನೆರವಿನಿಂದಾಗಿ ಶತ್ರು ಪಾಳಯದ ಮೇಲೆ ದಾಳಿ ಮಾಡಿಯೂ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳು ಸುರಕ್ಷಿತವಾಗಿ ಒಂದು ಸಣ್ಣ ಗೆರೆ ಕೂಡ ಹಾಕಿಸಿಕೊಳ್ಳದೇ ಸುರಕ್ಷಿತವಾಗಿ ವಾಪಸ್ ಆಗಿವೆ.
ಇನ್ನು ಇವುಗಳಂಥದೇ ವ್ಯವಸ್ಥೆ ಹೊಂದಿದ್ದ ಪಾಕಿಸ್ತಾನದ ಮಾನವರಹಿತ ವೈಮಾನಿಕ ವಾಹನವನ್ನು ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿ ಮಂಗಳವಾರು ಹೊಡೆದುರುಳಿಸಲಾಗಿದೆ. ಕಛ್ ಜಿಲ್ಲೆಯ ಅಬ್ದಸಾ ತಾಲೂಕಿನ ನಂಘಟದ್ ಗ್ರಾಮದ ಬಳಿ ಈ ಡ್ರೋಣ್ ನ ಅವಶೇಷಗಳು ಬಿದ್ದಿದ್ದವು.