ನವದೆಹಲಿ: ಬಾಲಾಕೋಟ್ ನಲ್ಲಿನ ಜೈಷ್ ಎ ಮೊಹಮ್ಮದ್ ಉಗ್ರರ ಕ್ಯಾಂಪ್ ಧ್ವಂಸ ಮಾಡಿದ ಬಳಿಕ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿದ್ದ ಪಾಕ್ ಸೇನೆಯ 5 ಪೋಸ್ಟ್ ಗಳ ಮೇಲೂ ಭಾರತೀಯ ಯೋಧರು ದಾಳಿ ಮಾಡಿ ಧ್ವಂಸ ಮಾಡಿದ್ದಾರೆ.
ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ಬಳಿಕ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಕದನ ವಿರಾಮ ಉಲ್ಲಂಘಿಸಿ ಪಾಕ್ ಸೈನಿಕರು ಭಾರತದತ್ತ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಮಂಗಳವಾರ ರಾತ್ರಿ ಪಾಕಿಸ್ತಾನ ಸೇನೆಯ 5 ಪೋಸ್ಟ್ ಗಳನ್ನು ಧ್ವಂಸ ಮಾಡಿದೆ.
ಇನ್ನು ಪಾಕಿಸ್ತಾನ ಪ್ರತೀಕಾರದ ಸೇಡು ತೀರಿಸಿಕೊಳ್ಳಲು ಮುಂದಾದರೆ ಅದಕ್ಕೆ ಸೂಕ್ತ ಕ್ರಮ ಕೈಗೊಂಡಿರುವ ಭಾರತೀಯ ವಾಯುಸೇನೆ ಸಂಭಾವ್ಯ ದಾಳಿಗೆ ಪ್ರತ್ಯುತ್ತರವಾಗಿ ಯುದ್ಧ ವಿಮಾನಗಳು ರನ್ ವೇಯಲ್ಲಿ ಸಜ್ಜಾಗಿ ನಿಂತಿವೆ.
ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದು ಪರಿಣಾಮ ಭಾರತೀಯ ಐವರು ಯೋಧರು ಗಾಯಗೊಂಡಿದ್ದರು. ಇದಕ್ಕೆ ಭಾರತೀಯ ಯೋಧರು ಪ್ರತ್ಯುತ್ತರ ನೀಡಿ ಐದು ಸೇನಾ ಪೋಸ್ಟ್ ಗಳನ್ನು ಧ್ವಂಸ ಮಾಡಿದ್ದು ಪಾಕ್ ಸೈನಿಕರು ಸಾವನ್ನಪ್ಪಿರುವ ಸಾಧ್ಯತೆ ಇದೆ.