ದೇಶ

ನಾಪತ್ತೆಯಾಗಿರುವ ವಿಂಗ್ ಕಮಾಂಡರ್ ಅಭಿನಂದನ್ ನಿವೃತ್ತ ಏರ್ ಮಾರ್ಷೆಲ್ ರ ಪುತ್ರ

Lingaraj Badiger
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಬುಧವಾರ ಪತನಗೊಂಡ ನಂತರ ನಾಪತ್ತೆಯಾಗಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು, ಪರಂ ವಿಶಿಷ್ಟ ಸೇವಾ ಪದಕ ವಿಜೇತ ಏರ್ ಮಾರ್ಷೆಲ್ ಸಿಂಹಕುಟ್ಟಿ ವರ್ತಮಾನ್ ಅವರ ಪುತ್ರ ಎಂದು ತಿಳಿದು ಬಂದಿದೆ.
ಈ ಮಧ್ಯೆ,  ಮಿಗ್-21 ವಿಮಾನವನ್ನು ಹೊಡೆದುರುಳಿಸಿ, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಅಲ್ಲದೆ ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪಾಕ್, ಇದೊಂದು ಅಭೂತಪೂರ್ವ ಯಶಸ್ಸು ಎಂದು ಹೇಳಿಕೊಂಡಿದೆ. ರಕ್ತಸಿಕ್ತ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿ ಕಾರಿನಲ್ಲಿ ಕರೆದೊಯ್ಯುವ ದೃಶ್ಯ ಇದರಲ್ಲಿದೆ.
ಭಾರತದ ಪೈಲಟ್ ನಾಪತ್ತೆಯಾಗಿರುವುದಾಗಿ ವಿದೇಶಾಂಗ ಸಚಿವಾಲಯ ಖಚಿತಪಡಿಸಿದ್ದು, ಅಭಿನಂದನ್ ತನ್ನ ವಶದಲ್ಲಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಆ ಕುರಿತು ತನಿಖೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು ಬೆಳಗ್ಗೆಯಷ್ಟೇ ಭಾರತೀಯ ವಾಯುಪಡೆಯ ಮಿಗ್-21 ವಿಮಾನ ಹೊಡೆದುರುಳಿಸಿರುವುದಾಗಿ ಹೇಳಿದ್ದ ಪಾಕ್ ಮೇಜರ್ ಜನರಲ್ ಆಸಿಫ್ ಗಫೂರ್, ಇದೀಗ ಉಲ್ಟಾ ಹೊಡೆದಿದ್ದು, ಬದ್ಗಾಮ್ ನಲ್ಲಿ ಪತನಗೊಂಡ ವಿಮಾನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
SCROLL FOR NEXT