ನವದೆಹಲಿ: ಭಾರತದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಭಾರತದ ವಿಂಡ್ ಕಮಾಂಡರ್ ಅಭಿನಂದನ್ ಹೊಡೆದುರುಳಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ವಾಯುಪಡೆಯ ಜೆಟ್ ವಿಮಾನಗಳು ಪಿಒಕೆಯಲ್ಲಿ ಉಗ್ರರ ಅಡಗುದಾಣಗಳನ್ನು ನಾಶ ಮಾಡಿ ವಾಪಸ್ ಆದ ಬೆನ್ನಲ್ಲೇ ಪಾಕಿಸ್ತಾನ ತಿರುಗೇಟು ನೀಡಲು ತನ್ನ 24 ಜೆಟ್ ಯುದ್ಧ ವಿಮಾನಗಳನ್ನು ಭಾರತದ ಗಡಿಯತ್ತ ಅಟ್ಟಿತ್ತು. ಭಾರತೀಯ ಸೇನಾ ಪೋಸ್ಟ್ ಗಳ ಮೇಲೆ ದಾಳಿ ಮಾಡಲೆಂದೇ ಭಾರತೀಯ ವಾಯುಗಡಿ ಉಲ್ಲಂಘನೆ ಮಾಡಿ ಆಗಮಿಸುತ್ತಿದ್ದ ಪಾಕಿಸ್ತಾನದ 24 ಎಫ್-16 ಯುದ್ಧ ವಿಮಾನಗಳನ್ನು ಭಾರತದ ಕೇವಲ 8 ಜೆಟ್ ಯುದ್ಧ ವಿಮಾನಗಳು ಅಟ್ಟಾಡಿಸಿ ವಾಯುಗಡಿಯಿಂದ ಹೊರಗೆ ಹಾಕಿವೆ. ನಾಲ್ಕು ಸುಖೋಯ್ 30ಎಸ್, ಎರಡು ಮಿರಾಜ್ 2000ಎಸ್ ಹಾಗೂ ಎರಡು ಮಿಗ್ 21 ಯುದ್ಧ ವಿಮಾನಗಳು ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸಿದವು. ಗಡಿ ಭಾಗದಲ್ಲಿನ ಸೇನಾ ವಲಯಗಳನ್ನು ಗುರಿಯಾಗಿಸಿಕೊಂಡಿದ್ದ ಪಾಕಿಸ್ತಾನ ಯುದ್ಧ ವಿಮಾನಗಳು ಲೇಸರ್ ಸೂಚಿತ ಬಾಂಬ್‌ಗಳನ್ನು ಎಸೆದು ಪರಾರಿಯಾಗಲು ಪ್ರಯತ್ನಿಸಿದವು. ಭಾರತದ ವಿಮಾನಗಳು ಎರಗಲು ಬಂದಿದ್ದರಿಂದ ಅವುಗಳ ಗುರಿ ತಪ್ಪಿದವು.
ಭಾರತ ವಾಯುಪಡೆ ವಿಮಾನಗಳಿಗಿಂತಲೂ ಮೂರು ಪಟ್ಟು ಹೆಚ್ಚು ವಿಮಾನಗಳನ್ನು ಒಳಗೊಂಡ ಪಾಕಿಸ್ತಾನದ ರಚನೆಗೆ ಜಗ್ಗದೆ, ವಿಂಗ್ ಕಮಾಂಡರ್ ಅಭಿನಂದನ್ ತಮ್ಮ ಮಿಗ್ 21 ಬೈಸನ್ ಜೆಟ್ ಮೂಲಕ ಅರ್ಥಮಾನ್ ಆರ್–73 ಕ್ಷಿಪಣಿಯನ್ನು ಪ್ರಯೋಗಿಸಿದರು. ಈ ವೇಳೆ ಪಾಕಿಸ್ತಾನದ ಎಫ್-1 ಯುದ್ಧ ವಿಮಾನ ಪತನವಾಯಿತು. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮತ್ತೊಂದು ಎಫ್–16 ಯುದ್ಧ ವಿಮಾನವೊಂದು ಎರಡು ಕ್ಷಿಪಣಿಗಳನ್ನು ಅಭಿನಂದನ್ ಇದ್ದ ಮಿಗ್–21 ವಿಮಾನಕ್ಕೆ ತೂರಿಬಿಟ್ಟಿದ್ದು, ಒಂದು ಕ್ಷಿಪಣಿ ಎಎಂಆರ್‌ಎಎಎಂ(ಅಡ್ವಾನ್ಸ್ಡ್ ಮೀಡಿಯಂ ರೇಂಜ್ ಏರ್–ಟು–ಏರ್ ಮಿಸೈಲ್) ಬಡಿಯಿತು. ಇದರಿಂದಾಗಿ ವಿಂಗ್ ಕಮಾಂಡರ್ ಅನಿವಾರ್ಯವಾಗಿ ವಿಮಾನದಿಂದ ಜಿಗಿಯಬೇಕಾಯಿತು. ಪ್ಯಾರಾಚೂಟ್ ನಲ್ಲಿ ಹಾರುತ್ತ ಅಭಿನಂದನ್ ಗಡಿ ನಿಯಂತ್ರಣ ರೇಖೆಯ ಪಾಕಿಸ್ತಾನದ ಭಾಗದಲ್ಲಿ ಬಿದ್ದರು.
ಬುಧವಾರ ಪಾಕಿಸ್ತಾನ ಸೇನೆ ಅವರ ಕಣ್ಣು ಹಾಗೂ ಕೈಗಳನ್ನು ಕಟ್ಟಿ ವಿಚಾರಣೆಗೆ ಒಳಪಡಿಸಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು. ಕೈದಿಗಳ ಬಗೆಗಿನ ಜಿನೆವಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಭಾರತ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ, ಅವರಿಗೆ ಚಿಕಿತ್ಸೆ ನೀಡಿ, ಕಣ್ಣು ಹಾಗೂ ಕೈಗಳಿಗೆ ಬಟ್ಟೆ ತೆಗೆದು ಚಹಾ ನೀಡಿ ಮತ್ತೊಂದು ವಿಡಿಯೊ ಅನ್ನು ಪಾಕಿಸ್ತಾನ ಹರಿಯಬಿಟ್ಟಿತ್ತು. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶುಕ್ರವಾರ ಭಾರತಕ್ಕೆ ಮರಳಿ ಕಳಿಹಿಸುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಘೋಷಿಸಿದ್ದಾರೆ.
ನಾಳೆ ಅಭಿನಂದನ್ ಬಿಡುಗಡೆಯಾಗಲಿದ್ದು, ಪೈಲಟ್ ಅಭಿನಂದನ್ ಅವರ ಪರಾಕ್ರಮವಿದೀಗ ದೇಶಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ. ಅಂತೆಯೇ ಭಾರತ ಮಾತೆಯ ವೀರ ಪುತ್ರನ ಸ್ವಾಗತಕ್ಕೆ ದೇಶಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos