ಚೆನ್ನೈ: ತುಂಬು ಗರ್ಭಿಣಿ ಮಹಿಳೆಗೆ ಹೆಚ್ಐವಿ ಸೋಂಕಿತ ರಕ್ತ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸದಂತೆ ಆತ್ಮಹತ್ಯೆ ಮಾಡಿಕೊಂಡಿದ್ದ ರಕ್ತದಾನಿಯ ಶವಪರೀಕ್ಷೆಯನ್ನು ವಿಡಿಯೋ ಮಾಡುವಂತೆ ಅಧಿಕಾರಿಗಳಿಗೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ.
ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಗರ್ಭಿಣಿ ಮಹಿಳೆಗೆ ಹೆಚ್ಐವಿ ಸೋಂಕಿತ ರಕ್ತ ವರ್ಗಾವಣೆ ಮಾಡಿದ್ದ ಪ್ರಕರಣಕ್ಕೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ರಕ್ತವನ್ನು ದಾನ ಮಾಡಿದ್ದ ಹೆಚ್ಐವಿ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಪ್ರಕರಣ ಸಂಬಂಧ ಮೃತ ವ್ಯಕ್ತಿಯ ತಾಯಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪುತ್ರ ಸಾವನ್ನಪ್ಪಿದ ಬಳಿಕ ಆಸ್ಪತ್ರೆಯ ಸಿಬ್ಬಂದಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಪುತ್ರನ ಸಾವಿನ ಹಿಂದ ಹಲವು ಅನುಮಾನಗಳು ಮೂಡತೊಡಗಿದ್ದು, ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರು.
ಇದರಂತೆ ಅರ್ಜಿಯನ್ನು ಪರಿಶೀಲನೆ ನಡೆಸಿರುವ ನ್ಯಾಯಮೂರ್ತಿ ಬಿ. ಪುಗಲೆಂಡಿಯವರು, ವೈದ್ಯಕೀಯ ಕಾಲೇಜಿನ ಇಬ್ಬರು ಪ್ರಾಧ್ಯಾಪಕರ ಸಮ್ಮುಖದಲ್ಲಿ ಶವಪರೀಕ್ಷೆ ನಡೆಸುವಂತೆ ರಾಜಾಜಿ ಆಸ್ಪತ್ರೆ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ತನಗೆ ಹೆಚ್ಐವಿ ಇದೆ ಎಂಬುದರ ಅರಿವಿಲ್ಲದ ವ್ಯಕ್ತಿಯೊಬ್ಬ ನವೆಂಬರ್ 30 ರಂದು ರಕ್ತ ದಾನ ಮಾಡಿದ್ದ. ಕೆಲ ದಿನಗಳ ಹಿಂದಷ್ಟೇ ವಿದೇಶಕ್ಕೆ ತೆರಳಬೇಕಿದ್ದ ಹಿನ್ನಲೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದ ಸಂದರ್ಭದಲ್ಲಿ ತನಗೆ ಮಾರಣಾಂತಿಕ ಕಾಯಿಲೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಕೂಡಲೇ ಬ್ಲಡ್ ಬ್ಯಾಂಕ್ ಬಂದಿರುವ ವ್ಯಕ್ತಿ, ಸಿಬ್ಬಂದಿಗಳಿಗೆ ಮಾಹಿತಿ ನೀಡಿ, ತನ್ನ ರಕ್ತವನ್ನು ಬೇರಾರಿಗೂ ನೀಡದಂತೆ ತಿಳಿಸಿದ್ದಾನೆ.
ಆದರೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಸಿಬ್ಬಂದಿಗಳು ಈ ಮಾಹಿತಿಯನ್ನು ದಾಖಲು ಮಾಡಿಕೊಳ್ಳದೆಯೇ ಆ ರಕ್ತವನ್ನು ತುಂಬು ಗರ್ಭಿಣಿಯೊಬ್ಬಳಿಗೆ ವರ್ಗಾವಣೆ ಮಾಡಿದ್ದಾರೆ. ಈ ಘಟನೆ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು.
ಟಿವಿ ಮಾಧ್ಯಮಗಳು ರಕ್ತದಾನ ಮಾಡಿದ್ದ ವ್ಯಕ್ತಿಯ ಫೋಟೋವನ್ನು ಪ್ರಸಾರ ಮಾಡಿದ್ದವು. ಇದರಿಂದ ತೀವ್ರವಾಗಿ ನೊಂದ ವ್ಯಕ್ತಿ ಡಿ.26 ಕಂಜು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ವ್ಯಕ್ತಿಯನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಆರೋಗ್ಯ ಸುಧಾರಿಸುತ್ತಿತ್ತು. ಆದರೆ, ಡಿ.30 ರಂದು ವ್ಯಕ್ತಿ ತನ್ನ ಮರ್ಮಾಂಗದಲ್ಲಿ ಇತೀವ್ರ ನೋವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಬಳಿಕ ಚಿಕಿತ್ಸೆ ನೀಡಲು ಮುಂದಾಗಿದ್ದ ವೈದ್ಯರು ಎರಡು ಗಂಟೆಗಳ ಬಳಿಕ ವ್ಯಕ್ತಿ ಮೃತಪಟ್ಟಿದ್ದಾನೆಂದು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos