ದೇಶ

ಗೋವಾ ಸಿಎಂ ಪರಿಕ್ಕರ್ ಬೆಡ್'ರೂಮ್'ನಲ್ಲಿರುವ ರಫೇಲ್ ಸೀಕ್ರೆಟ್ ಏನು: ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ

Manjula VN
ನವದೆಹಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಬೆಡ್ ರೂಮ್'ನಲ್ಲಿರುವ ರಫೇಲ್ ರಹಸ್ಯವೇನು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಬುಧವಾರ ಪ್ರಶ್ನಿಸಿದೆ. 
ಗೋವಾ ಸಂಪುಟ ಸಭೆ ಕೆಲ ದಿನಗಳ ಹಿಂದೆ ನಡೆದಿದ್ದು, ಸಭೆಯಲ್ಲಿ ಮಾತನಾಡಿರುವ ಪರಿಕ್ರರ್ ಅವರು, ರಫೇಲ್ ವಿಮಾನ ಖರೀದಿ ಕುರಿತ ಗೌಪ್ಯ ಮಾಹಿತಿಗಳು ನನ್ನ ಫ್ಲ್ಯಾಟ್'ನ ಬೆಡ್ ರೂಮ್ ನಲ್ಲಿದೆ. ಹೀಗಾಗಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆಂದು ಹೇಳಲಾಗುತ್ತಿದೆ. ಪರಿಕ್ಕರ್ ಅವರು ನೀಡಿರುವ ಈ ಹೇಳಿಕೆಯ ಆಡಿಯೋ ಟೇಪ್ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆಯವರ ಬಳಿಯಿದೆ ಎಂದು ಕಾಂಗ್ರೆಸ್ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ವಿಶ್ವಜಿತ್ ರಾಣೆಯವರು ಸಂಪುಟ ಸಭೆಯಲ್ಲಿ ನಡೆದ ಮಾತುಕತೆ ಕುರಿತಂತೆ ಅನಾಮಧೇಯ ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ. ಇದು ಅತ್ಯಂತ ಗೌಪ್ಯ ವಿಚಾರವೆಂದು ತಿಳಿಸಿದ್ದಾರೆ. ಸಭೆಯಲ್ಲಿ ಮುಖ್ಯಂತ್ರಿಗಳು ಅತ್ಯಂತ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದರು. ರಫೇಲ್ ವಿವಾದ ಕುರಿತಂತೆ ನನ್ನ ಬೆಡ್ ರೂಮ್ ನಲ್ಲಿ ಎಲ್ಲಾ ಮಾಹಿತಿಗಳಿವೆ ಎಂದು ಹೇಳಿದ್ದರು. ಇದನ್ನು ಕೇಳಿದ ವ್ಯಕ್ತಿ ಏನನ್ನು ಹೇಳುತ್ತಿದ್ದೀಯಾ? ಎಂದು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಣೆಯವರು ನಿನಗೆ ಸಂಪುಟದಲ್ಲಿ ಆಪ್ತರಾಗಿದ್ದವರನ್ನು ಈ ಬಗ್ಗೆ ಕೇಳಿ ನೋಡು ಎಂದಿದ್ದಾರೆಂದು ಸುರ್ಜೇವಾಲಾ ತಿಳಿಸಿದ್ದಾರೆ. 
ಮಾಜಿ ರಕ್ಷಣಾ ಸಚಿವ ಪರಿಕ್ಕರ್ ಅವರ ಬಳಿ ರಫೇಲ್ ವಿವಾದ ಕುರಿತ ಎಲ್ಲಾ ವಿವರಗಳಿವೆ. ಪರಿಕ್ಕರ್ ಅವರ ಬಳಿಯಿರುವ ದಾಖಲೆಗಳನ್ನು ಗೌಪ್ಯವಾಗಿಡಲಾಗಿದೆ. ನಮಗೆ ಸತ್ಯ ತಿಳಿಯಬೇಕು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮಗೆ ಉತ್ತರ ನೀಡಬೇಕು. ಸಂದರ್ಶನಗಳನ್ನು ನೀಡುವ ಮೋದಿಯವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಿಲ್ಲ. ದಾಖಲೆಗಳನ್ನು ಬಹಿರಂಗಪಡಿಸದಿರುವುದರ ಹಿಂದ ಇರುವ ರಹಸ್ಯವೇನು ಎಂದು ಪ್ರಶ್ನಿಸಿದ್ದಾರೆ. 
SCROLL FOR NEXT