ನವದೆಹಲಿ: ಸುಪ್ರೀಂ ಕೋರ್ಟ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಸಿಬಿಐ ನಿರ್ದೇಶಕ ಆಲೋಕ್ ಕುಮಾರ್ ವರ್ಮಾ ಅವರ ಭವಿಷ್ಯವನ್ನು ನಿರ್ಧರಿಸುವ ಉನ್ನತಾಧಿಕಾರ ಆಯ್ಕೆ ಸಮಿತಿಗೆ ತಮ್ಮ ಅನಂತರದ ಹಿರಿಯ ನ್ಯಾಯಮೂರ್ತಿ ಎ. ಕೆ. ಸಿಕ್ರಿ ಅವರನ್ನು ನಾಮ ನಿರ್ದೇಶನ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಆಯ್ಕೆ ಸಮಿತಿಯಲ್ಲಿ ಜಸ್ಟಿಸ್ ಸಿಕ್ರಿ ಅವರೂ ಓರ್ವ ಸದಸ್ಯರಾಗಿರಲಿದ್ದಾರೆ.
ಉನ್ನತಾಧಿಕಾರ ಆಯ್ಕೆ ಸಮಿತಿಯು ಪ್ರಧಾನಮಂತ್ರಿ, ಸಿಜೆಐ ಮತ್ತು ಸಂಸತ್ತಿನ ಅತೀ ದೊಡ್ಡ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುತ್ತದೆ. ಸಿಜೆಐ ಅವರು ನಿನ್ನೆ ಅಲೋಕ್ ವರ್ಮಾ ಅವರನ್ನೇ ಸಿಬಿಐ ನಿರ್ದೇಶಕರಾಗಿ ಮುಂದುವರಿಸಬೇಕೆಂದು ತೀರ್ಪು ನೀಡಿದ ಸುಪ್ರೀಂ ಪೀಠದ ಭಾಗವಾಗಿರುವುದರಿಂದ ಅವರು ಆಯ್ಕೆ ಸಮಿತಿಯಿಂದ ಹೊರಗುಳಿದಿದ್ದಾರೆ.
ಸಿಬಿಐ ನಿರ್ದೇಶಕ ಆಲೋಕ್ ಕುಮಾರ್ ವರ್ಮಾ ಅವರ ಅಧಿಕಾರಾವಧಿಯು ಇದೇ ಜನವರಿ 31ರಂದು ಅಂತ್ಯಗೊಳ್ಳಲಿದೆ.