ದೇಶ

ಅಯೋದ್ಯೆ ವಿವಾದ: ಅರ್ಜಿ ವಿಚಾರಣೆಯಿಂದ ನ್ಯಾ.ಉದಯ್ ಲಲಿತ್ ಹಿಂದೆ ಸರಿದಿದ್ದೇಕೆ?

Srinivasamurthy VN
ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ಅಯೋದ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿ ಉದಯ್ ಲಲಿತ್ ಅವರು ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ.
ವಿಚಾರಣೆ ನಡೆಸುತ್ತಿದ್ದ ಪಂಚ ಸದಸ್ಯ ಪೀಠದಲ್ಲಿ ಉದಯ್ ಲಲಿತ್ ಅವರನ್ನು ಮುಂದುವರೆಸಲು ಮುಸ್ಲಿಂ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ನ್ಯಾಯಮೂರ್ತಿ ಉದಯ್ ಲಲಿತ್ ಅವರು, 1994ರಲ್ಲಿ ಇದೇ ಪ್ರಕರಣದಲ್ಲಿ ವಕೀಲರಾಗಿ ವಾದ ಮಂಡಿಸಿದ್ದರು. ಬಳಿಕ ನ್ಯಾಯಮೂರ್ತಿಳಾಗಿ ಆಯ್ಕೆಯಾಗಿ ಇದೀಗ ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠಕ್ಕೆ ಸೇರ್ಪಡೆಯಾಗಿದ್ದಾರೆ. ಹಾಗಾಗಿ, ಅವರು ಪಂಚ ಸದಸ್ಯ ಪೀಠದಲ್ಲಿರುವುದಕ್ಕೆ ತಮ್ಮ ಆಕ್ಷೇಪವಿದೆ ಎಂದು ಅರ್ಜಿದಾರರು ಹೇಳಿದ್ದರು.
ಕಲಾಪ ಆರಂಭವಾಗುತ್ತಿದ್ದಂತೆಯೇ ಮುಸ್ಲಿಂ ಅರ್ಜಿದಾರರ​ ಪರ ವಕೀಲರು ಪಂಚ ಸದಸ್ಯರ ಪೀಠ ರಚನೆ ಬಗ್ಗೆ ಪ್ರಶ್ನೆಯನ್ನು ಎತ್ತಿದರು. ಏಕೆಂದರೆ ಪಂಚ ಸದಸ್ಯರ ಪೀಠದಲ್ಲಿ ಇರುವ ಜಸ್ಟೀಸ್​ ಯು ಯು ಲಲಿತ್​​ ಅವರು ಅಯೋಧ್ಯೆ ಬಾಬ್ರಿ ಮಸೀದ ಧ್ವಂಸ ಪ್ರಕರಣದಲ್ಲಿ ವಕೀಲರಾಗಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಲಾಯಿತು. ಈ ಆಕ್ಷೇಪಣೆ ಹಿನ್ನೆಲೆಯಲ್ಲಿ ಜಸ್ಟೀಸ್​​ ಉದಯ್ ಉಮೇಶ್ ಲಲಿತ್ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ, ಮತ್ತೆ ಅಯೋಧ್ಯೆ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಮುಂದೂಡದೇ ಬೇರೆ ವಿಧಿಯಿಲ್ಲ ಎಂದು ಸಿಜೆಐ ರಂಜನ್ ಗೊಗೊಯ್​ ಹೇಳಿದ್ದಾರೆ. 
ಕಳೆದ ಎರಡು ದಿನಗಳ ಹಿಂದಷ್ಟೇ ಅಯೋಧ್ಯೆ ವಿಚಾರಣೆಗಾಗಿ ಸಿಜೆಐ ರಂಜನ್‌ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್‌. ಎ. ಬೊಬ್ಡೆ, ಎನ್​. ವಿ. ರಮಣ, ಉದಯ್‌ ಉಮೇಶ್‌ ಲಲಿತ್‌ ಹಾಗೂ ಡಿ. ವೈ. ಚಂದ್ರಚೂಡ್‌ ಅವರನ್ನ ಒಳಗೊಂಡ ಪೀಠವನ್ನ ಸುಪ್ರೀಂಕೋರ್ಟ್​​ ರಚನೆ ಮಾಡಿತ್ತು. ಇದೀಗ ಮುಂದಿನ ವಿಚಾರಣೆಯನ್ನ ಜನವರಿ 29ಕ್ಕೆ ಮುಂದೂಡಿದೆ.
ಸುನ್ನಿ ವಕ್ಫ್​​ ಬೋರ್ಡ್​​, ನಿರ್ಮೋಹಿ ಅಖಾಡ ಹಾಗೂ ರಾಮಲಲ್ಲಾ  ಟ್ರಸ್ಟ್​​ಗೆ ವಿವಾದಿತ ಪ್ರದೇಶದ 2.77 ಎಕರೆ ಜಾಗವನ್ನು ಸಮಾನಾಗಿ ಹಂಚಿ ಅಲಹಾಬಾದ್​ ಹೈಕೋರ್ಟ್​​ 2010ರಲ್ಲಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ 14 ಅರ್ಜಿಗಳು ಸಲ್ಲಿಕೆ ಆಗಿದ್ದವು.
ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್​​ನ ಆದೇಶ ಬಂದ ನಂತರ ಆ ಬಗ್ಗೆ ಚಿಂತನೆ ಮಾಡುವುದಾಗಿ ಹೇಳಿದ್ದರು. ಹೀಗಾಗಿ ಈ ವಿಚಾರಣೆ ಮಹತ್ವ ಪಡೆದುಕೊಂಡಿದೆ. ಸದ್ಯ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಹಿಂದು ಸಂಘಟನೆಗಳು ಒತ್ತಡ ಹೇರುತ್ತಿವೆ.
SCROLL FOR NEXT