ದುಬೈ: ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರ ಬಗ್ಗೆ ತಮಗೆ ಅಪಾರ ಗೌರವವಿದ್ದು, ತಮಗೆ ಸರಿ ಎನಿಸಿದ್ದನ್ನು ಮಾಡುವ ಹಕ್ಕು ಅವರಿಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದುಬೈ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಮೈತ್ರಿ ಕುರಿತಂತೆ ಮಾತನಾಡಿದರು. ಈ ವೇಳೆ ಅಖಿಲೇಶ್ ಮತ್ತು ಮಾಯಾವತಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್ ಪಿ ಮತ್ತು ಬಿಎಸ್ ಪಿ ಪಕ್ಷಗಳ ಮೈತ್ರಿಯಿಂದ ನನಗೆ ಖಂಡಿತಾ ಬೇಸರವಾಗಿಲ್ಲ. ಬದಲಿಗೆ ಹೆಚ್ಚು ಖುಷಿಯಾಗಿದೆ. ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರ ಬಗ್ಗೆ ತಮಗೆ ಅಪಾರ ಗೌರವವಿದ್ದು, ತಮಗೆ ಸರಿ ಎನಿಸಿದ್ದನ್ನು ಮಾಡುವ ಹಕ್ಕು ಅವರಿಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಗೆಲುವು ತಮಗೆ ಹಾಗೂ ತಮ್ಮ ಪಕ್ಷಕ್ಕೆ ಅತ್ಯಂತ ಮುಖ್ಯವಾಗಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಸಾಕಷ್ಟು ಹಿಡಿತಹೊಂದಿದೆ. ಪ್ರಸ್ತುತ ಬಿಎಸ್ ಪಿ ಮತ್ತು ಎಸ್ ಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಹಿನ್ನಡೆಯಾಗಿಲ್ಲ, ಬದಲಿಗೆ ನಮ್ಮ ನಿರ್ಧಾರ ಕೈಗೊಳ್ಳಲು ನಾವು ಸ್ವತಂತ್ರರಾಗಿದ್ದೇವೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೇ ಎಸ್ ಪಿ ಮತ್ತು ಬಿಎಸ್ ಪಿ ಪಕ್ಷಗಳು ಪರಸ್ಪರ ಮೈತ್ರಿ ಮಾರ್ಗದಲ್ಲಿ ನಡೆಯುತ್ತಿವೆ. ಹೀಗಾಗಿ ಹಾಲಿ ನಿರ್ಧಾರದಿಂದ ತಮಗೇನೂ ಅಚ್ಚರಿಯಾಗಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇನ್ನು ನಿನ್ನೆ ನಡೆದ ಎಸ್ ಬಿ ಮತ್ತು ಬಿಎಸ್ ಪಿ ಸಭೆಯಲ್ಲಿ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರು 50-50 ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳುವ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಆ ಮೂಲಕ ಮಹಾ ಘಟ್ ಬಂಧನ್ ಹೊರತಾಗಿಯೂ ಉತ್ತರ ಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಹೊರತು ಪಡಿಸಿ ಎಸ್ ಪಿ ಮತ್ತು ಬಿಎಸ್ ಪಿ ಮೈತ್ರಿಕೂಟ ರಚನೆಯಾಗಿದೆ.