ದೇಶ

ಕುಂಭಮೇಳದಲ್ಲಿ ಕಾಲ್ತುಳಿತ ತಪ್ಪಿಸಲು ಯುಪಿ ಪೊಲೀಸರ ಹೊಸ ತಂತ್ರ ಇದು..!

Srinivasamurthy VN
ಲಖನೌ: ಬಹು ನಿರೀಕ್ಷಿತ ಕುಂಭಮೇಳ 2019ರಲ್ಲಿ ಜನ ಪ್ರವಾಹ ಮತ್ತು ಕಾಲ್ತುಳಿತ ದಂತಹ ಪ್ರಕರಣಗಳನ್ನು ತಡೆಯಲು ಉತ್ತರ ಪ್ರದೇಶ ಪೊಲೀಸರು ಹೊಸದೊಂದು ಯೋಜನೆ ರೂಪಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಮತ್ತು ಉತ್ತರ ಪ್ರದೇಶ ಪೊಲೀಸರು ಕುಂಭಮೇಳಕ್ಕೆ ಸಕಲ ಸಿದ್ಧತೆ ನಡೆಸಿಕೊಂಡಿದ್ದು, ಕುಂಭಮೇಳಕ್ಕಾಗಿ ಸಾವಿರಾರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕ ಒಪಿ ಸಿಂಗ್ ಅವರು, ಕುಂಭಮೇಳದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಕುಂಭಮೇಳ ಸಂದರ್ಭದಲ್ಲಿ ಭಕ್ತಾದಿಗಳ ಪವಿತ್ರ ಸ್ನಾನಕ್ಕೆ 41 ಸೆಕೆಂಡ್ ಗಲ ಕಾಲಾವಕಾಶ ನೀಡಲಾಗಿದೆ. 41 ಸೆಕೆಂಡ್ ಗಳ ಒಳಗೆ ಭಕ್ತಾದಿಗಳು ಸ್ನಾನ ಮುಗಿಸಿಕೊಂಡು ಹೊರಬಂದು ಇತರರಿಗೆ ಅವಕಾಶ ಮಾಡಿಕೊಡಬೇಕು. ಇದಕ್ಕಿಂತಲೂ ಹೆಚ್ಚಿನ ಕಾಲಾವಕಾಶ ಕೊಟ್ಟರೆ ಸ್ನಾನಘಟ್ಟದಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿ ಜನ ಪ್ರವಾಹ ಮತ್ತು ಕಾಲ್ತುಳಿತ ನಡೆಯುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ಅಂತೆಯೇ ಈ ವರ್ಷದ ಕುಂಭಮೇಳವನ್ನು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಭಧ್ರತೆಗಾಗಿ 20 ಸಾವಿರದಿಂದ 22 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಇದಲ್ಲದೆ 80 ಬೆಟಾಲಿಯನ್ ಪ್ಯಾರಾಮಿಲಿಟರಿ ಪಡೆ, ರ್ಯಾಪಿಡ್ ಆ್ಯಕ್ಷನ್ ಫೋರ್ಸ್, ಅಗ್ನಿಶಾಮಕದಳ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ, ಏರಿಯಲ್ ಸ್ನೈಪರ್ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಿಂಗ್ ಮಾಹಿತಿ ನೀಡಿದರು.
SCROLL FOR NEXT