ದೇಶ

ಪ್ರಧಾನಿ ಮೋದಿಯವರು ಮನುಸ್ಮೃತಿ ಬದಲಿಗೆ ಸಂವಿಧಾನ ಓದಿ ಅರ್ಥಮಾಡಿಕೊಳ್ಳಲಿ; ಸಿಪಿಎಂ ವಾಗ್ದಾಳಿ

Sumana Upadhyaya

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಟೀಕಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಸಿಪಿಎಂ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಮನುಸ್ಮೃತಿ ಅಥವಾ ಆರ್ ಎಸ್ಎಸ್ ಭಾಷೆ ತೆಗೆದುಕೊಳ್ಳುವುದರ ಬದಲಿಗೆ ದೇಶದ ಸಂವಿಧಾನವನ್ನು ಪ್ರಧಾನಿ ಮೋದಿಯವರು ಓದಿ ಅರ್ಥಮಾಡಿಕೊಂಡು ಎತ್ತಿಹಿಡಿಯುವ ಕೆಲಸ ಮಾಡಲಿ ಎಂದು ಹೇಳಿದರೆ, ಶಬರಿಮಲೆ ವಿವಾದವನ್ನು ಬಿಜೆಪಿಯು ರಾಜಕೀಯ ಅವಕಾಶವಾದಿತನವಾಗಿ ಬಳಸಿಕೊಳ್ಳಲು ಬಿಜೆಪಿ ನೋಡುತ್ತಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಳ್ಳಪಳ್ಳಿ ರಾಮಚಂದ್ರನ್ ಟೀಕಿಸಿದ್ದಾರೆ.

ಕೊಲ್ಲಮ್ ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಬರಿಮಲೆ ವಿಚಾರದಲ್ಲಿ ಎಲ್ ಡಿಎಫ್ ಸರ್ಕಾರ ನಡೆದುಕೊಳ್ಳುವ ರೀತಿ ನಾಚಿಕೆಗೇಡಿನ ನಡವಳಿಕೆಯಾಗಿದ್ದು ಇದು ಇತಿಹಾಸದಲ್ಲಿ ಉಳಿಯಲಿದೆ ಎಂದು ಟೀಕಿಸಿದ್ದರು.

ಇನ್ನೊಂದೆಡೆ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ದ್ವಂದ್ವ ನಿಲುವು ತಳೆದಿದೆ ಎಂದಿದ್ದರು. ಕಾಂಗ್ರೆಸ್ ಸಂಸತ್ತಿನಲ್ಲಿ ಒಂದು ಮಾತು ಹೇಳಿದರೆ ಶಬರಿಮಲೆಯಲ್ಲಿ ಮತ್ತೊಂದು ರೀತಿಯಲ್ಲಿ ನಡೆದುಕೊಳ್ಳುತ್ತದೆ. ಶಬರಿಮಲೆ ವಿಚಾರದಲ್ಲಿ ಯುಡಿಎಫ್ ಸ್ಪಷ್ಟ ನಿಲುವು ಏನೆಂಬುದನ್ನು ಹೇಳಲಿ ಎಂದಿದ್ದರು.

ಇದಕ್ಕೆ ಪ್ರಧಾನಿ ಮೋದಿ ವಿರುದ್ಧ ಟ್ವಿಟ್ಟರ್ ನಲ್ಲಿ ಹರಿಹಾಯ್ದಿರುವ ಸಿಪಿಎಂ, ಹಿಂಜರಿಕೆಯ ಮನಸ್ಥಿತಿಯವರಿಂದ ಕೇರಳಕ್ಕೆ ಸಾಂಸ್ಕೃತಿಕ ಪಾಠ ಕಲಿಯಬೇಕಾದ ಅಗತ್ಯವಿಲ್ಲ.ಕೊಲ್ಲಮ್ ನಲ್ಲಿ ಲೋಕೋಪಯೋಗಿ ಯೋಜನೆಯನ್ನು ಉದ್ಘಾಟಿಸಲು ಬಂದವರು ಶಬರಿಮಲೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಬಗ್ಗೆ ಮಾತನಾಡಿ ಎಲ್ ಡಿಎಫ್ ಸರ್ಕಾರ ಆದೇಶ ಜಾರಿಗೆ ತರುತ್ತಿಲ್ಲ ಎಂದು ಮಾತನಾಡುವ ಅಗತ್ಯವೇನಿದೆ, ನಿಜಕ್ಕೂ ಮೋದಿಯವರಿಗೆ ನಾಚಿಕೆಯಾಗಬೇಕು ಎಂದಿದ್ದರು.

ಮೋದಿಯವರು ಮೊದಲು ಭಾರತ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಟ್ವೀಟ್ ಮಾಡಿದೆ.

SCROLL FOR NEXT