ಲಖನೌ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ತಳ್ಳುವ ನಿಟ್ಟಿನಲ್ಲಿ ಎಸ್ಪಿ- ಬಿಎಸ್ಪಿ ಮೈತ್ರಿಯೊಂದಿಗೆ ಆರ್ ಎಲ್ ಡಿ ಮತ್ತಿತರ ಪಕ್ಷಗಳನ್ನು ಸೇರ್ಪಡೆ ಮಾಡಿಕೊಳ್ಳುವುದಾಗಿ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಜಾಟ್ ಪ್ರಾಬಲ್ಯದ ಪಕ್ಷದೊಂದಿಗೆ ಶೀಘ್ರದಲ್ಲಿಯೇ ಸೀಟು ಹಂಚಿಕೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು.ಕಾಂಗ್ರೆಸ್ ಹೊರತುಪಡಿಸಿದ ಪ್ರತಿಪಕ್ಷಗಳ ಮೈತ್ರಿ ಉತ್ತರ ಪ್ರದೇಶದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ನೀಡಿದ ಸಂದರ್ಶನದಲ್ಲಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಎಸ್ಪಿ- ಎಸ್ಪಿ ನಡುವೆ ಸಮಾನವಾಗಿ ಸೀಟು ಹಂಚಿಕೆಯಾಗಿದ್ದು, ಈ ವಿಚಾರದಲ್ಲಿ ಮಾಯಾವತಿ ಪ್ರಾಬಲ್ಯ ಕುರಿತಂತೆ ಮಾತನಾಡುತ್ತಿರುವ ಬಿಜೆಪಿಯ ಹೇಳಿಕೆ ಸರಿಯಲ್ಲ. ಬಿಜೆಪಿಯವರು ಕೆಳಮಟ್ಟದ ಭಾಷೆ ಬಳಸಿ ಟೀಕಿಸಿದ್ದರೂ ನಾನು ಆ ರೀತಿಯಲ್ಲಿ ಮಾತನಾಡುವುದಿಲ್ಲ ಎಂದರು.
ಜೆಪಿ ನಡ್ಡಾ ಅವರನ್ನು ಉತ್ತರ ಪ್ರದೇಶ ಉಸ್ತುವಾರಿವಾಗಿ ಬಿಜೆಪಿ ನೇಮಕ ಮಾಡಿದೆ. ಆದ್ದರಿಂದ ಅವರು ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಬಹುದು, ಬಿಜೆಪಿ ಪಕ್ಷದ ಶಾಸಕರು, ಸಂಸದರು ಕ್ಷೇತ್ರದಲ್ಲಿ ಯಾರೂ ಇಲ್ಲ. ಮುಂಬರುವ ಚುನಾವಣೆಯಲ್ಲಿ ತಮ್ಮ ಸೋಲು ಖಚಿತ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅಖಿಲೇಶ್ ಯಾದವ್ ಹೇಳಿದರು.