ಕೋಲ್ಕತಾ: ಇನ್ನು ಮುಂದೆ ಬಿಜೆಪಿಗೆ ಯಾವತ್ತೂ ಅಚ್ಛೆ ದಿನ್ ಬರುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಹೇಳಿದ್ದಾರೆ.
ಇಂದು ಕೋಲ್ಕತಾದಲ್ಲಿ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕಾಗಿ ಆಯೋಜಿಸಲಾಗಿದ್ದ ಒಕ್ಕೂಟ ಭಾರತ ಸಮಾವೇಶದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ದೇಶದ ಜನತೆಗೆ ಅಚ್ಛೆ ದಿನ್ ತರುವುದಕ್ಕಾಗಿ ಬಿಜೆಪಿಗೆ ಸಾಕಷ್ಟು ಸಮಯ ನೀಡಲಾಗಿತ್ತು. ಆದರೆ ಅಚ್ಛೆ ದಿನ್ ಬರಲೇ ಇಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಸರ್ಕಾರದ ಅವಧಿ ಮುಗಿದಿದೆ. ಪ್ರತಿಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಪ್ರಮಾಣ ಮಾಡಿದ್ದು, ಲೋಕಸಭೆ ಚುನಾವಣೆ ನಂತರ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂದು ದೀದಿ ಹೇಳಿದ್ದಾರೆ.
ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಮತ್ತು ನಿತೀನ್ ಗಡ್ಕರಿ ಸೇರಿದಂತೆ ಹಲವು ಬಿಜೆಪಿಯ ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ. ಒಂದು ವೇಳೆ ಬಿಜೆಪಿ ಮತ್ತೆ ಗೆದ್ದು ಅಧಿಕಾರಕ್ಕೆ ಬಂದರೂ ಅವರನ್ನು ಕಡೆಗಣಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಮೆಗಾ ರ್ಯಾಲಿಯಲ್ಲಿ 'ಬದಲಿಸಿ, ಬದಲಿಸಿ, ಕೇಂದ್ರ ಸರ್ಕಾರ ಬದಲಿಸಿ' ಎಂಬ ಘೋಷಣೆಯನ್ನು ಕೂಗಿದರು.
ಕೋಲ್ಕತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ ಒಕ್ಕೂಟ ಭಾರತ ಸಮಾವೇಶ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ಜುಲ್ಲಾ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ. ಈ ಮೂಲಕ ಮೇನಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರೋಧಿ ಪಕ್ಷಗಳು ಬೃಹತ್ ಮಟ್ಟದಲ್ಲಿ ಒಂದಾಗಲಿವೆ ಎಂಬ ಸಂದೇಶ ರವಾನಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics