ದೇಶ

ಭಯೋತ್ಪಾದನೆ ತೊರೆದು ಸೇನೆ ಸೇರಿ ಹುತಾತ್ಮನಾಗಿದ್ದ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿಗೆ 'ಅಶೋಕ ಚಕ್ರ'

Srinivasamurthy VN
ನವದೆಹಲಿ: ಭಯೋತ್ಪಾದನೆ ತೊರೆದು ಭಾರತೀಯ ಸೇನೆ ಸೇರಿ ಭಯೋತ್ಪಾದಕ ಗುಂಡೇಟಿಗೆ ಬಲಿಯಾಗಿದ್ದ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರ 'ಅಶೋಕ ಚಕ್ರ' ಗೌರವ ಘೋಷಣೆ ಮಾಡಲಾಗಿದೆ.
ಹೌದು ಭಯೋತ್ಪಾದನೆಗಿಳಿದು ಬಳಿಕ ಮನಃಪರಿವರ್ತನೆ ಬಳಿಕ ಭಾರತೀಯ ಸೇನೆ ಸೇರಿ ಕುಲ್ಗಾಮ್ ಎನ್ಕೌಂಟರ್ ನಲ್ಲಿ ವೀರ ಮರಣವನ್ನಪ್ಪಿದ್ದ ವೀರ ಯೋಧ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರ 'ಅಶೋಕ ಚಕ್ರ' ಗೌರವ ನೀಡಲಾಗುತ್ತಿದೆ. ಇದೇ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಂದು ವೀರ ಯೋಧನ ಕುಟುಂಬಕ್ಕೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಬಗ್ಗೆ ಭಾರತ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.
ಮೊದಲು ಉಗ್ರನಾಗಿದ್ದ ದಕ್ಷಿಣ ಕಾಶ್ಮೀರದ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಮನಃ ಪರಿವರ್ತನೆ ಬಳಿಕ 2004ರಲ್ಲಿ ಸೇನೆ ಸೇರಿದ್ದರು. ಇವರ ಕರ್ತವ್ಯ ನಿಷ್ಠೆಗೆ 2007ರಲ್ಲಿ ಶೌರ್ಯ ಪ್ರಶಸ್ತಿಯನ್ನೂ ಪಡೆದಿದ್ದರು. ಆದರೆ ಕಳೆದ ವರ್ಷ ನವೆಂಬರ್ ನಲ್ಲಿ ಶೋಫಿಯಾನ್ ಜಿಲ್ಲೆಯಲ್ಲಿ ಉಗ್ರರ ಜೊತೆ ಹೋರಾಡುತ್ತಾ ತನ್ನ ಪ್ರಾಣವನ್ನು ದೇಶಕ್ಕೆ ಅರ್ಪಿಸಿದ್ದರು.
ಗಣರಾಜ್ಯೋತ್ಸವದಂದು ಲ್ಯಾನ್ಸ್ ನಾಯಕ್ ನಝೀರ್ ಅಹಮದ್ ವಾನಿ ಕುಟುಂಬದವರು ಅಶೋಕ ಚಕ್ರ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಪ್ರಶಸ್ತಿ ಸೇನೆಯ ಶಾಂತಿ ಕಾಲದಲ್ಲಿ ನೀಡುವ ಅತ್ಯುನ್ನತ ಸೇನಾ ಪ್ರಶಸ್ತಿಯಾಗಿದೆ. 38 ವರ್ಷದ ವಾನಿ ಅವರು ಜಮ್ಮು ಕಾಶ್ಮೀರದ ಕುಲ್ಗಾಂನ ಅಶ್‍ಮುಜಿ ಪ್ರದೇಶದವರು. ವಾನಿ ಹುತಾತ್ಮರಾಗುವ ಮುನ್ನ ಅವರ ಅಸಾಧಾರಣ ಹೋರಾಟಕ್ಕೆ ಸೇನಾ ಮೆಡಲ್ ಕೂಡ ನೀಡಿ ಗೌರವಿಸಲಾಗಿತ್ತು. ಅಲ್ಲದೇ ಅಶೋಕ ಚಕ್ರ ಪ್ರಶಸ್ತಿ ಪಡೆದ ಮೊದಲ ಜಮ್ಮು ಕಾಶ್ಮೀರಿಗರಾಗಿದ್ದಾರೆ.
ಇನ್ನು ವಾನಿ ಅಂತ್ಯ ಸಂಸ್ಕಾರದ ವೇಳೆ ಅವರ ಕುಟುಂಬಸ್ಥರನ್ನು ಮತ್ತೋರ್ವ ಯೋಧ ಸಂತೈಸುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಈ ವೀರ ಯೋಧನಿಗೆ ಭಾರತ ಸರ್ಕಾರ ಅಗ್ರ ಗೌರವ ನೀಡಿ ಸತ್ಕರಿಸುತ್ತಿದೆ.
SCROLL FOR NEXT