ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ
ನವದೆಹಲಿ: ದೇಶಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ದೇಶದ ಪ್ರಜೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ಭಾಷಣ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರ ಭಾಷಣಕ್ಕೆ ಕೆಂಪುಕೋಟೆ ಸಕಲ ರೀತಿಯಲ್ಲೂ ಸಜ್ಜಾಗಿದೆ.
70ನೇ ಗಣರಾಜ್ಯೋತ್ಸವಕ್ಕೆ ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಸಜ್ಜುಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಲಿರುವ ಭಾಷಣಕ್ಕಾಗಿ ಇಡೀ ದೇಶವೂ ಕುತೂಹಲದಿಂದ ಕಾಯುತ್ತಿದೆ. ಅದರಲ್ಲೂ 2019 ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ಗಣರಾಜ್ಯೋತ್ಸವ ಇದಾಗಿರುವುದರಿಂದ ಮತ್ತಷ್ಟು ಕುತೂಹಲ ಸೃಷ್ಟಿಸಿದೆ.
ಬೆಳಿಗ್ಗೆ 9.50 ಕ್ಕೆ ವಿಜಯ ಚೌಕ್ ನಿಂದ ರಾಜಪಥದ ಮೂಲಕ ಸಾಗಿ ತಿಲಕ್ ಮಾರ್ಗ್, ಭದೂರ್ ಶಾ ಜಾಫರ್ ಮಾರ್ಗ, ನೇತಾಜಿ ಮಾರ್ಗದ ಗುಂಟ ಮೆರವಣಿಗೆ ಸಾಗಲಿದ್ದು, ವಿವಿಧ ರಾಜ್ಯಗಳ ಪ್ರಾತ್ಯಕ್ಷಿಕೆಗಳು ಗಮನ ಸೆಳೆಯಲಿವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಇಂದು ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಅಂತೆಯೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಕೆಂಪುಕೋಟೆ ಸುತ್ತಮುತ್ತ ಅಭೂತಪೂರ್ವ ಭದ್ರತೆ ನಿಯೋಜಿಸಲಾಗಿದೆ. 25000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದ್ದು, 36 ಮಹಿಳಾ ಕಮಾಂಡೋಗಳನ್ನೂ ನೇಮಿಸಲಾಗಿದ್ದು, ಎಲ್ಲೆಡೆಯೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಡ್ರೋನ್ ಕ್ಯಾಮರಾಗಳು ಹಾರಾಟ ನಡೆಸುತ್ತಿದ್ದು, ಯಾವುದೇ ರೀತಿಯ ದಾಳಿ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಟ್ರಾಫಿಕ್ ಬದಲಾವಣೆಯ ಮೇಲುಸ್ತುವಾರಿಗಾಗಿಯೇ 3000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos