ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ನಜೀರ್ ಅಹ್ಮದ್ ವಾನಿ ಕುಟುಂಬ
ನವದೆಹಲಿ: ಹೊಟ್ಟೆಗೆ ಉಗ್ರರು ಸಿಡಿಸುತ್ತಿದ್ದ ಸರಣಿ ಗುಂಡುಗಳು ಹೊಕ್ಕುತ್ತಿದ್ದರೂ, ಕಿರಿಯ ಸೈನಿಕರಿಗೆ ಅಡ್ಡಲಾಗಿ ನಿಂತು 6 ಉಗ್ರರ ಕೊಂದು ಹಾಕಿದ್ದ ಭಾರತದ ವೀರ ಯೋಧ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಕುಟುಂಬಸ್ಥರಿಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ಪ್ರದಾನ ಮಾಡಿದರು.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್ ಪ್ರದೇಶದ ಬತಗುಂದ್ ಗ್ರಾಮದಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ ಹುತಾತ್ಮರಾಗಿದ್ದ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಅವರಿಗೆ ದೇಶದ ಅತ್ಯುನ್ನತ ಶಾಂತಿ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿ ಘೋಷಿಸಲಾಗಿದ್ದು, ಮರಣೋತ್ತರವಾಗಿ ನೀಡಲಾದ ಈ ಪ್ರಶಸ್ತಿಯನ್ನು ಲ್ಯಾನ್ಸ್ ನಾಯಕ್ ಅವರ ಪತ್ನಿ ಮತ್ತು ತಾಯಿ ಸ್ವೀಕರಿಸಿದ್ದಾರೆ.
ನವೆಂಬರ್ನಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ 38 ವರ್ಷದ ಲ್ಯಾನ್ಸ್ ನಾಯಕ್ ಅವರ ದೇಹ ಮತ್ತು ತಲೆಗೆ ಹಲವಾರು ಗುಂಡುಗಳನ್ನು ಹಾರಿಸಲಾಗಿತ್ತು. ಸಾಯುವ ಹಂತದಲ್ಲಿಯೂ ತನ್ನ ಮುಂದಿದ್ದ 6 ಉಗ್ರರನ್ನು ಹತ್ಯೆಗೈದು ಭಾರತೀಯ ಕೆಲ ಸೈನಿಕರ ಜೀವವನ್ನು ಉಳಿಸಿದ್ದರು.
ಉಗ್ರನಾಗಿ ಬಳಿಕ ಭಾರತದ ವೀರಯೋಧನಾಗಿ ಪರಿವರ್ತನೆಗೊಂಡಿದ್ದ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ
ಮೊದಲು ಉಗ್ರನಾಗಿದ್ದ ದಕ್ಷಿಣ ಕಾಶ್ಮೀರದ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಮನಃ ಪರಿವರ್ತನೆ ಬಳಿಕ 2004ರಲ್ಲಿ ಸೇನೆ ಸೇರಿದ್ದರು. ಇವರ ಕರ್ತವ್ಯ ನಿಷ್ಠೆಗೆ 2007ರಲ್ಲಿ ಶೌರ್ಯ ಪ್ರಶಸ್ತಿಯನ್ನೂ ಪಡೆದಿದ್ದರು. ಆದರೆ ಕಳೆದ ವರ್ಷ ನವೆಂಬರ್ ನಲ್ಲಿ ಶೋಫಿಯಾನ್ ಜಿಲ್ಲೆಯಲ್ಲಿ ಉಗ್ರರ ಜೊತೆ ಹೋರಾಡುತ್ತಾ ತನ್ನ ಪ್ರಾಣವನ್ನು ದೇಶಕ್ಕೆ ಅರ್ಪಿಸಿದ್ದರು. ಅವರ ಸಾವಿಗೆ ಇಡೀ ಊರಿಗೆ ಊರೇ ಸೇರಿ ಶ್ರದ್ಧಾಂಜಲಿ ಅರ್ಪಿಸಿತ್ತು.
ಲ್ಯಾನ್ಸ್ ನಾಯಕ್ ಅವರಿಗೆ ನೀಡಲಾದ ಅಶೋಕಚಕ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಲ್ಯಾನ್ಸ್ ನಾಯಕ್ ಅವರ ಪತ್ನಿ ಸ್ವೀಕರಿಸಿದ್ದಾರೆ. ಲ್ಯಾನ್ಸ್ ನಾಯಕ್ ನಜೀರ್ ಅಹಮದ್ ವಾನಿ ಅಶೋಕಚಕ್ರ ಪ್ರಶಸ್ತಿ ಪಡೆದ ಮೊದಲ ಕಾಶ್ಮೀರಿಗರಾಗಿದ್ದಾರೆ. ಇನ್ನು ವಾನಿ ಅಂತ್ಯ ಸಂಸ್ಕಾರದ ವೇಳೆ ಅವರ ಕುಟುಂಬಸ್ಥರನ್ನು ಮತ್ತೋರ್ವ ಯೋಧ ಸಂತೈಸುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಈ ವೀರ ಯೋಧನಿಗೆ ಭಾರತ ಸರ್ಕಾರ ಅಗ್ರ ಗೌರವ ನೀಡಿ ಸತ್ಕರಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos