ದೇಶ

ಯುಕೆ ಕೋರ್ಟ್ ನೀಡಿದ್ದ ಗಡಿಪಾರು ಆದೇಶ ಪ್ರಶ್ನಿಸಲು ವಿಜಯ್ ಮಲ್ಯಗೆ ಅವಕಾಶ!

Srinivasamurthy VN
ಲಂಡನ್: ಮಹತ್ವದ ಬೆಳವಣಿಗೆಯಲ್ಲಿ ಭಾರತ ಮೂಲದ ಘೋಷಿತ ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯರ ಗಡಿಪಾರು ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕಳೆದ ಡಿಸೆಂಬರ್​ನಲ್ಲಿ ಕೆಳ ನ್ಯಾಯಾಲಯ ನೀಡಿದ್ದ ಗಡಿಪಾರು ಆದೇಶವನ್ನು ಮರುಪರಿಶೀಲನೆ ನಡೆಸುವಂತೆ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಇದೀಗ ಲಂಡನ್​  ಹೈಕೋರ್ಟ್ ಸಮ್ಮತಿ ಸೂಚಿಸಿದೆ.
ಏಪ್ರಿಲ್ ನಲ್ಲಿ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ರಾಯಲ್‌ ಕೋರ್ಟ್‌ ಆಫ್‌ ಜಸ್ಟೀಸ್‌ ಆಡಳಿತ ವಿಭಾಗದ ದ್ವಿಸದಸ್ಯ ಪೀಠ ಕೈಗೆತ್ತಿಕೊಂಡಿತ್ತು. ಬ್ರಿಟನ್‌ ಗೃಹ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ನೀಡಿದ್ದ ಭಾರತಕ್ಕೆ ಗಡಿಪಾರು ಆದೇಶವನ್ನು ಮಲ್ಯ ಪ್ರಶ್ನಿಸಿದ್ದರು. ಜೀವಕ್ಕೆ ಕುತ್ತು, ತೀವ್ರ ಕಿರುಕುಳ ಅಥವಾ ತಮ್ಮೊಂದಿಗೆ ಉತ್ತಮ ರೀತಿಯಲ್ಲಿ ಸರಕಾರ ವ್ಯವಹರಿಸದು ಕಾರಣದಿಂದ ಮಾನವ ಹಕ್ಕುಗಳ ಸಬೂಬು ನೀಡಿ ಗಡೀಪಾರು ವಿರುದ್ಧ ಮಲ್ಯ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಭಾರತದ ಬ್ಯಾಂಕುಗಳಿಗೆ 9 ಸಾವಿರ ಕೋಟಿ ವಂಚಿಸಿ ದೇಶ ಬಿಟ್ಟು ಲಂಡನ್ ​ಗೆ ಪರಾರಿಯಾಗಿರುವ ವಿಜಯ್​ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂಬ ಭಾರತದ ಮನವಿಗೆ ಸ್ಪಂದಿಸಿದ್ದ ಬ್ರಿಟನ್​ ಸರ್ಕಾರದ ಗೃಹ ಸಚಿವಾಲಯ, ಮಲ್ಯ ಗಡಿಪಾರಿಗೆ ಆದೇಶ ನೀಡಿತ್ತು. ಗಡಿಪಾರು ಆದೇಶಕ್ಕೆ ಸಚಿವಾಲಯದ ಸಜ್ಜಿದ್ ಜಾವೆದ್​ ಸಹಿ ಮಾಡಿದ್ದರು. ಕಳೆದ ವರ್ಷದ ಡಿಸೆಂಬರ್​ನಲ್ಲಿ ಗಡಿಪಾರು ಸಂಬಂಧ ವಿಚಾರಣೆ ನಡೆಸಿದ್ದ ವೆಸ್ಟ್​ ಮಿನ್ ಸ್ಟರ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ, ವಿಜಯ್​ ಮಲ್ಯ ಸಾಲ ತೀರಿಸದೆ ದೇಶ ಬಿಟ್ಟು ಬಂದಿರುವುದಕ್ಕೆ ಸಾಕ್ಷ್ಯಾಧಾರಗಳಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಡಿಸೆಂಬರ್ ನಲ್ಲಿ ಆದೇಶ ನೀಡಿತ್ತು. 
SCROLL FOR NEXT