ದೇಶ

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಮಾಲೀಕ: ಪೊಲೀಸ್ ಠಾಣೆಯೇ ಮನೆಯಾಯ್ತು ಈ ನಾಯಿಗೆ!

Lingaraj Badiger
ಸಾಗರ (ಮಧ್ಯ ಪ್ರದೇಶ): ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಮತ್ತು ನಂಬಿಗಸ್ಥ ಪ್ರಾಣಿ. ಆದರೆ ಈ ಕಥೆಯಲ್ಲಿ ಮನುಷ್ಯ ಸಹ ನಾಯಿಯ ಉತ್ತಮ ಸ್ನೇಹಿತ ಎಂಬುದು ಸಾಬೀತಾಗಿದೆ.
ಕಳೆದ ಜೂನ್ 21ರಂದು ಕೊಲೆ ಪ್ರಕರಣವೊಂದರಲ್ಲಿ ಕುಟುಂಬದ ಸದಸ್ಯರೆಲ್ಲರೂ ಜೈಲು ಸೇರಿದ್ದು, ಅನಾಥವಾದ ಲ್ಯಾಬ್ರಡಾರ್ ನಾಯಿಯನ್ನು ಪೊಲೀಸರೇ ಸಾಕುತ್ತಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ.
ಹೌದು, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಐದು ಜನರ ಕೊಲೆ ಪ್ರಕರಣವೊಂದರಲ್ಲಿ ಒಂದೇ ಕುಟುಂಬದ 6 ಸದಸ್ಯರನ್ನು ಬಂಧಿಸಲಾಗಿತ್ತು. ಈ ವೇಳೆ ಕುಟುಂಬದ ಸಾಕುನಾಯಿ ಸುಲ್ತಾನ್ ಅನಾಥವಾಗಿತ್ತು.
ನಾಯಿ ಮನೆಯಲ್ಲಿ ಅನಾಥವಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಛೋಟಾ ಬಜಾರಿಯಾ ಠಾಣಾಧಿಕಾರಿ ಮನೀಶಾ ತಿವಾರಿ ಅವರು ನಾಯಿಯ ಪೋಷಣೆ ಮಾಡುತ್ತಿದ್ದಾರೆ.
ಬಾಯಾರಿಕೆ ಮತ್ತು ಹಸಿವಿಂದ ಕಂಗೆಟ್ಟಿದ್ದ ನಾಯಿ , ನಾವು ಅಲ್ಲಿಗೆ ಹೋಗುತ್ತಿದ್ದಂತೆ ಮೈಮೇಲೆ ಎರಗಲು ಪ್ರಯತ್ನಿಸಿತು. ಬಳಿಕ ಊಟ ಕೊಟ್ಟು ಸ್ನೇಹ ಸಂಪಾದಿಸಿದೆವು. ನೆರೆಮನೆಯವರ ಬಳಿ ನಾಯಿಯನ್ನು ನೋಡಿಕೊಳ್ಳುತ್ತೀರ ಎಂದು ಕೇಳಿದಾಗ ಅವರೊಪ್ಪಲಿಲ್ಲ. ಹೀಗಾಗಿ ನಾಯಿಯನ್ನು ಠಾಣೆಯಲ್ಲಿಯೇ ಇಟ್ಟುಕೊಂಡಿದ್ದೇವೆ, ಎನ್ನುತ್ತಾರೆ ತಿವಾರಿ. 
ಸದ್ಯ ಪೊಲೀಸ್ ಠಾಣೆಯನ್ನೇ ತನ್ನ ಹೊಸ ವಾಸ್ತವ್ಯವನ್ನಾಗಿ ಮಾಡಿಕೊಂಡಿರುವ ಸುಲ್ತಾನ್, ಠಾಣೆಯ ಪೊಲೀಸರ ಸ್ನೇಹ ಸಂಪಾದಿಸಿದೆ. ಸುಲ್ತಾನ್ ಊಟ, ಉಪಚಾರವನ್ನು ಮನೀಶಾ ತಿವಾರಿ ಅವರೇ ನೋಡಿಕೊಳ್ಳುತ್ತಿದ್ದು, ಸುಲ್ತಾನ್ ಇದೀಗ ಠಾಣೆಯ ಓರ್ವ ಸದಸ್ಯನಾಗಿದ್ದಾನೆ ಎನ್ನುತ್ತಾರೆ ಮನೀಶಾ. ಅಲ್ಲದೆ ಈ ನಾಯಿಯನ್ನು ಯಾರಾದರೂ ದತ್ತು ತೆಗೆದುಕೊಳ್ಳುವುದಾದರೆ ಅವರಿಗೆ ಒಪ್ಪಿಸುವುದಾಗಿ ಹೇಳಿದ್ದಾರೆ.
SCROLL FOR NEXT