ಗಯಾದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳು
ಗಯಾ: ಬಿಹಾರದ ಗಯಾದ ಅನುಗ್ರಹ ನಾರಾಯಣ್ ಮಗಧ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕಳೆದ ಜುಲೈ 2ರಿಂದ 6 ಮಂದಿ ಮಕ್ಕಳು ಮೃತಪಟ್ಟಿದ್ದು ಮಿದುಳು ಜ್ವರದಿಂದ ಅಸುನೀಗಿರಬಹುದು ಎಂದು ಶಂಕಿಸಲಾಗಿದೆ.
ಜುಲೈ 2ರಿಂದ ಒಟ್ಟು 22 ಮಕ್ಕಳು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದು ಅವರಲ್ಲಿ 6 ಮಕ್ಕಳು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ ವಿ ಕೆ ಪ್ರಸಾದ್ ತಿಳಿಸಿದ್ದಾರೆ.
ಇದುವರೆಗೆ 22 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು ಅವರು ಮಿದುಳು ಜ್ವರದಿಂದ ಬಳಲುತ್ತಿರಬಹುದು, ಆದರೆ ವೈದ್ಯರು ಇನ್ನೂ ದೃಢಪಡಿಸಿಲ್ಲ, ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಮುಜಾಫರ್ ಪುರದಲ್ಲಿ ಈಗಾಗಲೇ ಮಿದುಳು ಜ್ವರದಿಂದ ಮೃತಪಟ್ಟ ಮಕ್ಕಳ ಸಂಖ್ಯೆ 142ಕ್ಕೇರಿದೆ. ಕಳೆದೊಂದು ತಿಂಗಳಿನಿಂದ ಬಿಹಾರದ ಮುಜಾಫರ್ ಪುರ ಜಿಲ್ಲೆಯಲ್ಲಿ ತೀವ್ರ ಜ್ವರದಿಂದ ಮಕ್ಕಳು ಬಳಲುತ್ತಿದ್ದಾರೆ.