ದೇಶ

ಅಮರಾವತಿ ಅಭಿವೃದ್ಧಿಗೆ ವಿಘ್ನ: ಚಂದ್ರಬಾಬು ನಾಯ್ಡು ಕನಸಿನ ಯೋಜನೆಗೆ ವಿಶ್ವಬ್ಯಾಂಕ್ ಸಾಲ ನೀಡಲ್ಲ!

Vishwanath S
ಹೈದರಾಬಾದ್: ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರ ಕನಸಿನ ಯೋಜನೆ ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಗೆ ಹಣ ಒದಗಿಸುವುದನ್ನು ವಿಶ್ವಬ್ಯಾಂಕ್ ಕೈಬಿಟ್ಟಿದೆ. 
ಕೇಂದ್ರ ಸರ್ಕಾರ ಎರಡು ಸಾವಿರ ಕೋಟಿ ರೂ. ಸಾಲ ಪ್ರಸ್ತಾವನೆಯ ಅರ್ಜಿಯನ್ನು ಹಿಂತೆಗೆದುಕೊಂಡ ನಂತರ ವಿಶ್ವಬ್ಯಾಂಕ್ ಈ ನಿರ್ಧಾರಕ್ಕೆ ಬಂದಿದೆ. ಬಲವಂತದ ಭೂ ಸ್ವಾಧೀನದಂತಹ ಅಕ್ರಮಗಳ ಕುರಿತಾದ ದೂರುಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ವಿಶ್ವ ಬ್ಯಾಂಕ್ ಕೇಂದ್ರದಿಂದ ಅನುಮತಿ ಕೋರಿತು. ಆದರೆ ಕೇಂದ್ರ ಸರ್ಕಾರವು ಅದಕ್ಕೆ ಅನುಮತಿ ನೀಡುವ ಬದಲು ಸಾಲ ಪ್ರಸ್ತಾವನೆಯ ಅರ್ಜಿಯನ್ನೇ ಹಿಂತೆಗೆದುಕೊಂಡಿತ್ತು. 
ತೆಲಂಗಾಣ ವಿಭಜನೆ ಬಳಿಕ ಆಂಧ್ರಪ್ರದೇಶಕ್ಕಾಗಿ ಅಮರಾವತಿಯಲ್ಲಿ ನೂತನ ರಾಜಧಾನಿಯನ್ನು ನಿರ್ಮಿಸುವುದು ಚಂದ್ರಬಾಬು ನಾಯ್ಡು ಅವರ ಕನಸಿನ ಯೋಜನೆಯಾಗಿತ್ತು. ಈ ಯೋಜನೆಗೆ ಅಂದಾಜು 1 ಲಕ್ಷ ಕೋಟಿ ರೂ.ಗಳ ಹಣಕಾಸನ್ನು ನಿರೀಕ್ಷಿಸಲಾಗಿತ್ತು. ಇದೀಗ ವಿಶ್ವಬ್ಯಾಂಕ್ ಸಾಲ ನೀಡಲು ನಿರಾಕರಿಸಿರುವುದು ನೂತನ ಸರ್ಕಾರ ವೈಎಸ್ ಆರ್ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯಾಗುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ವಿಜಯ್ ಸಾಯಿ ರೆಡ್ಡಿ ತಿಳಿಸಿದ್ದಾರೆ. 
ಜಗನ್ ನೇತೃತ್ವದ ನೂತನ ಸರ್ಕಾರಕ್ಕೆ ವಿಶ್ವಬ್ಯಾಂಕ್ ನಿಂದ ಸಾಲಕ್ಕೆ ಹೊಸದಾಗಿ ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದು ವಿಜಯ್ ಸಾಯಿ ರೆಡ್ಡಿ ಹೇಳಿದ್ದಾರೆ. 
ಅಮರಾವತಿಯಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ರೈತರು ದೂರು ದಾಖಲಿಸಿದ್ದು ಇದನ್ನು ವಿರೋಧಿಸಿ ಅನೇಕ ಎನ್ಜಿಒಗಳು ಹಾಗೂ ಪರಿಸರವಾದಿಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. 
SCROLL FOR NEXT