ದೇಶ

ಶೌಚಾಲಯದಲ್ಲಿ ಶಾಲಾಮಕ್ಕಳಿಗೆ ಅಡುಗೆ ಮಾಡಿದರೆ ತಪ್ಪೇನು..? ಮಧ್ಯ ಪ್ರದೇಶ ಸಚಿವೆಯ ಮಾತು!

Srinivasamurthy VN
ಭೋಪಾಲ್: ಅಂಗನವಾಡಿ ಮಕ್ಕಳಿಗೆ ಶೌಚಾಲಯದಲ್ಲಿ ಅಡುಗೆ ತಯಾರಿಸಿದರೆ ತಪ್ಪೇನು ಎಂದು ಹೇಳುವ ಮೂಲಕ ಮಧ್ಯ ಪ್ರದೇಶದ ಸಚಿವರೊಬ್ಬರು ತಮ್ಮ ಧಿಮಾಕು ತೋರಿಸಿದ್ದಾರೆ.
ಮಧ್ಯ ಪ್ರದೇಶದ ಕೆರೆರಾ ಪ್ರಾಂತ್ಯದಲ್ಲಿನ ಅಂಗನವಾಡಿಯಲ್ಲಿ ಜಾಗದ ಅಭಾವದಿಂದಾಗಿ ಅಲ್ಲಿನ ಶಿಕ್ಷಕರು ಶೌಚಾಲಯದಲ್ಲೇ ಮಕ್ಕಳಿಗೆ ಅಡುಗೆ ತಯಾರಿಸುತ್ತಿದ್ದಾರೆ. ಈ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿತ್ತರವಾಗಿ ವೈರಲ್ ಆಗುತ್ತಿದೆ. 
ಈ ಕುರಿತಂತೆ ಮಧ್ಯ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದಾಗ, ಅಲ್ಲಿನ ಸಚಿವೆ ಇಮಾರ್ತಿ ದೇವಿ ಅವರು ಉಡಾಫೆ ಉತ್ತರ ನೀಡಿದ್ದಾರೆ. 'ನೀವು ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಅಡುಗೆ ಮಾಡಲು ಅಲ್ಲಿ ಸೂಕ್ತ ಜಾಗವಿಲ್ಲ. ಹೀಗಾಗಿ ಶಿಕ್ಷಕರು ಶೌಚಾಲಯದ ಪಕ್ಕದಲ್ಲಿ ಅಡುಗೆ ಮಾಡಿಕೊಂಡಿದ್ದಾರೆ. ಅದರಲ್ಲಿ ತಪ್ಪೇನು. ಈಗ ನಮ್ಮ ಮನೆಗಳಲ್ಲಿಯೇ ಅಟ್ಯಾಚ್ ಬಾತ್ರೂಮ್ ಮತ್ತು ಲೆಟ್ರಿನ್ ಗಳಿರುವುದಿಲ್ಲವೇ. ಹಾಗೆಂದ ಮಾತ್ರಕ್ಕೆ ನೀವು ಮನೆಯಲ್ಲಿ ತಿನ್ನುವುದನ್ನು ಬಿಟ್ಟು ಬಿಡುತ್ತೀರೇನು ಎಂದು ಪ್ರಶ್ನೆ ಮಾಡಿದ್ದಾರೆ.
ಅವರ ಪ್ರಶ್ನೆ ವಿವಾದಕ್ಕೀಗುತ್ತಿದೆ ಎಂದು ತಿಳಿಯುತ್ತಿದ್ದಂತೆಯೇ ಮತ್ತೆ ಸ್ಪಷ್ಟನೆ ನೀಡಿರುವ ಅವರು ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. 
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ದೇವೇಂದ್ರ ಸುಂದ್ರಿಯಾಲ್ ಅವರು, ಪ್ರಕರಣದ ತನಿಖೆಗೆ ಆದೇಶಿಸಿದ್ದೇವೆ. ಪ್ರಸ್ತುತ ಅಡುಗೆ ತಯಾರಿಸುತ್ತಿರುವ ಬಾತ್ ರೂಮ್  ಮುಚ್ಚಲಾಗಿದ್ದು, ಸ್ಥಳೀಯ ಯುವಕರ ನೆರವನಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಂತೆಯೇ ಅಂಗನವಾಡಿ ಮೇಲ್ವಿಚಾರಕರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
SCROLL FOR NEXT