ದೇಶ

ಅಜಂ ಖಾನ್ ಆಕ್ಷೇಪಾರ್ಹ ಹೇಳಿಕೆ: ಕ್ಷಮೆಯಾಚಿಸುವಂತೆ ಮಹಿಳಾ ಸಂಸದರ ಆಗ್ರಹ

Lingaraj Badiger
ನವದೆಹಲಿ: ವಿವಾದಾತ್ಮಕ ರಾಜಕಾರಣಿ, ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರು ಗುರುವಾರ ಲೋಕಸಭೆಯಲ್ಲಿ ಬಿಹಾರ ಬಿಜೆಪಿ ಸಂಸದೆ ರಮಾದೇವಿ ಅವರ ಕುರಿತು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಶುಕ್ರವಾರ ಮಹಿಳಾ ಸಂಸದರು ತೀವ್ರವಾಗಿ ಖಂಡಿಸಿದ್ದು, ಖಾನ್ ಅವರು ಈ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರನ್ನು ಸದನದಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ನಾನು ಸರ್ವಪಕ್ಷ ನಾಯಕರ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರು ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಪುರುಷ ಸಂಸದರು ಸೇರಿದಂತೆ ಎಲ್ಲಾ ಸಂಸದರಿಗೂ ಇದೊಂದು ಕಪ್ಪು ಚುಕ್ಕೆ. ನಾವು ಮುಖ ಪ್ರೇಕ್ಷಕರಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಖಾನ್ ಹೇಳಿಕೆ ಖಂಡನೀಯ ಎಂದರು.
ಪುರುಷರು ಹೆಣ್ಣು ಮಕ್ಕಳ ಕಣ್ಣಲ್ಲಿ ಕಣ್ಣನಿಟ್ಟು ನೋಡುವುದಕ್ಕಾಗಿ ಈ ಸದನ ಇಲ್ಲ. ನಿನ್ನೆ ಇಲ್ಲಿ ಏನು ನಡೆದಿದೆ ಎಂಬುದನ್ನು ಇಡೀ ದೇಶ ನೋಡಿದೆ ಎಂದು ಸ್ಮೃತಿ ಇರಾನಿ ಹೇಳಿದೆರು.
ಇನ್ನು ನಿರ್ಮಲಾ ಸೀತಾರಾಮನ್ ಸಹ ಅಜಂ ಖಾನ್ ಹೇಳಿಕೆಯನ್ನು ಖಂಡಿಸಿದ್ದು, ಅವರ ವಿರುದ್ಧ ಇತರರಿಗೆ ಮಾದರಿಯಾಗುವಂತಹ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಪೀಕರ್ ಗೆ ಒತ್ತಾಯಿಸಿದರು.
ನಿನ್ನೆ ತ್ರಿವಳಿ ತಲಾಖ್ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಇತರ ಸದಸ್ಯರ ಗದ್ದಲಕ್ಕೆ ಗಮನಕೊಡದೇ ತಮ್ಮನ್ನು ಉದ್ದೇಶಿಸಿ ಮಾತನಾಡುವಂತೆ ಸ್ಪೀಕರ್ ಅನುಪಸ್ಥಿತಿಯಲ್ಲಿ ಕಲಾಪ ನಡೆಸುತ್ತಿದ್ದ ಬಿಜೆಪಿ ಸಂಸದೆ ರಮಾದೇವಿ ಅವರು ಅಜಂ ಖಾನ್ ಅವರಿಗೆ ಸೂಚಿಸಿದ್ದಾರೆ.
ಈ ವೇಳೆ ರಮಾದೇವಿಯವರನ್ನು ಉದ್ದೇಶಿಸಿ ಮಾತನಾಡಿದ ಅಜಂ ಖಾನ್, ‘ಆಪ್ ಕೀ ಆಂಖೋ ಮೇ ಆಂಖೇ ಡಾಲ್ ಕೇ ಬಾತ್ ಕರ್ ನೇ ಕಾ ಮನ್ ಕರ್ ತಾ ಹೈ’ (ನಿಮ್ಮ ಕಣ್ಣಲ್ಲಿ ಕಣ್ಣನಿಟ್ಟು ಮಾತನಾಡುವ ಬಯಕೆ ಉಂಟಾಗುತ್ತಿದೆ) ಎಂದು ಹೆಳಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಭಾಧ್ಯಕ್ಷರ ಪೀಠದಲ್ಲಿದ್ದ ರಮಾದೇವಿ ಅವರು ‘ಇದು ಮಾತನಾಡುವ ರೀತಿ ಅಲ್ಲ, ಮತ್ತು ಈ ಮಾತುಗಳನ್ನು ಕಡತದಿಂದ ತೆಗೆದು ಹಾಕಿ’ ಎಂದು ಸೂಚನೆ ಕೊಟ್ಟರು. ತಕ್ಷಣ ತನ್ನ ತಪ್ಪನ್ನು ಅರ್ಥ ಮಾಡಿಕೊಂಡ ಸಂಸದ ಅಜಂ ಖಾನ್ ‘ನಿಮ್ಮ ಬಗ್ಗೆ ಅಪಾರವಾದ ಗೌರವ ಇದೆ ; ನೀವು ನನ್ನ ಸಹೋದರಿ ಇದ್ದ ಹಾಗೆ’ ಎಂದು ಹೇಳಿ ಪ್ರಕರಣಕ್ಕೆ ತೆರ ಎಳೆಯಲು ಪ್ರಯತ್ನಿಸಿದರು.
SCROLL FOR NEXT