ದೇಶ

ಉನ್ನಾವ್ ಅತ್ಯಾಚಾರ ಪ್ರಕರಣ: ಭುಗಿಲೆದ್ದ ಸಾರ್ವಜನಿಕ ಆಕ್ರೋಶ

Srinivas Rao BV
ಲಖನೌ: ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಸಾರ್ವಜನಿಕ ಆಕ್ರೋಶ ಸ್ಫೋಟಗೊಂಡ ಬಳಿಕ ಉನ್ನಾವ್ ಅತ್ಯಾಚಾರದ ಪ್ರಕರಣದ ಅಪಘಾತದ ತನಿಖೆಯನ್ನು ಸಿಬಿಐ ಮಂಗಳವಾರ ಕೈಗೆತ್ತಿಕೊಂಡಿದೆ. 
ಇಂದು ಕೂಡ ಈ ವಿಚಾರ ಸಂಸತ್ತಿನಲ್ಲಿ ಪ್ರಸ್ತಾಪವಾಗಿದೆ, ಸದನದ ಕಲಾಪ ಆರಂಭವಾದ ಕೂಡಲೇ  ಪ್ರತಿಪಕ್ಷದ ಸದಸ್ಯರು ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದರು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ವಿಷಯವನ್ನು ವಿವರಿಸಲು ಯತ್ನಿಸಿದಾಗ, ಸಿಬಿಐ ವಿಚಾರಣೆ ನಡೆಸುತ್ತಿದೆ, ಹೀಗಾಗಿ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಕ್ಷೇಪ ವ್ಯಕ್ತಪಡಿಸಿದರು. 
ಅಪಘಾತಕ್ಕೆ ಕಾರಣವಾಗಿದೆ ಎನ್ನಲಾದ ಟ್ರಕ್ ಸಮಾಜವಾದಿ ಪಕ್ಷದ ಮುಖಂಡನಿಗೆ ಸೇರಿದೆ ಎಂದು ಬಿಜೆಪಿಯ ಜಗದಾಂಬಿಕಾ ಪಾಲ್ ಆರೋಪಿಸಿ, ಕಾಂಗ್ರೆಸ್ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ದೂರಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಘೋಷಣೆ ಕೂಗಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಡಿಎಂಕೆ ಸದಸ್ಯರು ಸದನದ ಬಾವಿಗಿಳಿದರು. 
ನಿರಂತರ ಗದ್ದಲ, ಧರಣಿಯ ನಡುವೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಗ್ರಾಹಕ ಸಂರಕ್ಷಣಾ ಮಸೂದೆಯ ಮಂಡನೆಗೆ ಅನುಮತಿ ಕೋರಿದರು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಬಾರದು ಎಂದು ನಿರ್ಧರಿಸಲಾಗಿದೆ ಎಂದರು.
ಇದರಿಂದ ಕೆರಳಿದ ಕಾಂಗ್ರೆಸ್, ಎಸ್;ಪಿ, ಬಿಎಸ್;ಪಿ, ಡಿಎಂಕೆ ಮತ್ತು ಮತ್ತು ಟಿಎಂಸಿ ಸದಸ್ಯರು ಸಭಾತ್ಯಾಗ ಮಾಡಿದರು. ಉತ್ತರ ಪ್ರದೇಶದ ರಾಜಧಾನಿಯಲ್ಲಿ, ಅತ್ಯಾಚಾರದಿಂದ ಬದುಕುಳಿದ ಕುಟುಂಬದ ಸದಸ್ಯರು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಕೇಂದ್ರದ ಹೊರಗೆ ಧರಣಿ ನಡೆಸಿದರು.  
ಅಪಘಾತದಲ್ಲಿ ಮೃತಪಟ್ಟ ಪತ್ನಿ ಪುಷ್ಪಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿಕ್ಕಪ್ಪ ಮಹೇಶ್ ಸಿಂಗ್ ಅವರನ್ನು ಬರೇಲಿ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಸಂತ್ರಸ್ತೆಯ  ಕುಟುಂಬದ ಸದಸ್ಯರು ಒತ್ತಾಯಿಸಿದರು. ಪ್ರಕರಣಕ್ಕೆ ಸಂಬಧಪಟ್ಟಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 307 (ಕೊಲೆ ಯತ್ನ), 506 (ಕ್ರಿಮಿನಲ್ ಬೆದರಿಕೆ), 120 ಬಿ (ಕ್ರಿಮಿನಲ್ ಪಿತೂರಿ) ಕಾಯಿದೆಯಡಿಯಲ್ಲಿ  ಬಿಜೆಪಿ ಶಾಸಕ ಸೇರಿದಂತೆ ಇತರೆ 10 ಮಂದಿಯ ವಿರುದ್ಧ ಎಫ್;ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯ ಸಚಿವ ಸ್ವಾತಿ ಸಿಂಗ್ ನಿರ್ದೇಶನದ ಮೇರೆಗೆ ಸಂತ್ರಸ್ತರ  ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದು, ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿ, ಜೊತೆಗೆ  ಗಾಯಗೊಂಡವರಿಗೆ ರಾಜ್ಯ ಸರ್ಕಾರವು ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ.  ಈ ವಿಷಯದಲ್ಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ  ಎಸ್;ಐಟಿ ತನಿಖೆ ನಡೆಸಬೇಕೆಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು;ನಾನು ವೈದ್ಯರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುವ  ಭರವಸೆ ನೀಡಿದ್ದಾರೆ ಎಂದರು. ಅತ್ಯಾಚಾರಕ್ಕೊಳಗಾದವರ ಕುಟುಂಬಕ್ಕೆ ಪಕ್ಷದ ವತಿಯಿಂದ  10 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಘೋಷಿಸಿದರು. ರಾಷ್ಟ್ರೀಯ ಮಹಿಳಾ ಆಯೋಗದ ತಂಡದ ಉಪ ಕಾರ್ಯದರ್ಶಿ ಜ್ಯೋತಿ ಸಿಂಘಾಲ್ ನೇತೃತ್ವದಲ್ಲಿ, ಅತ್ಯಾಚಾರಕ್ಕೊಳಗಾದವರ ಕುಟುಂಬ ಸದಸ್ಯರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಅಪಘಾತದ ಬಗ್ಗೆ ಮಾಹಿತಿ ಪಡೆದುಕೊಂಡಿದೆ. 
ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಸುದ್ದಿಗಾರರ ಜೊತೆ ಮಾತನಾಡಿ, ಎರಡು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಉನ್ನಾವ್ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ರಕ್ಷಣೆ ಮಾಡುವುದಿಲ್ಲ, ಆರೋಪ ಸಾಬೀತಾದರೆ ಶಾಸಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
SCROLL FOR NEXT