ದೇಶ

ನಿರ್ಣಾಯಕ ಹಂತದಲ್ಲಿ ತ್ರಿವಳಿ ತಲಾಖ್ ಮಸೂದೆ; ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರಿಗೆ ವಿಪ್ ಜಾರಿ

Srinivasamurthy VN
ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೀಡಾಗಿರುವ ತ್ರಿವಳಿ ತಲಾಖ್‌ ತಿದ್ದುಪಡಿ ವಿಧೇಯಕಕ್ಕೆ ಸಂಸತ್ ಅನುಮೋದನೆ ಪಡೆಯಲು ಹರಸಾಹಸಪಡುತ್ತಿರುವ ಮೋದಿ ಸರ್ಕಾರ ಈ ಸಂಬಂಧ ತಮ್ಮ ಬಿಜೆಪಿ ರಾಜ್ಯಸಭೆ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.
ವಿಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಗುರುವಾರ ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರ ದೊರೆತಿತ್ತು. ಇದೀಗ ರಾಜ್ಯಸಭೆಯ ಅನುಮೋದನೆ ಬಾಕಿ ಇದ್ದು, ರಾಜ್ಯಸಭೆಯಲ್ಲೂ ಅನುಮೋದನೆ ದೊರೆತರೆ ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕುವುದರೊಂದಿಗೆ ಅದು ಕಾನೂನಾಗಿ ಮಾರ್ಪಾಡಾಗುತ್ತದೆ. ಈ ಹಿನ್ನಲೆಯಲ್ಲಿ ಇಂದು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮತ್ತೆ ಚರ್ಚೆಯಾಗಲಿದ್ದು, ಈ ವೇಳೆ ಮಸೂದೆ ಕುರಿತಂತೆ ಬಿಜೆಪಿ ತನ್ನ ರಾಜ್ಯಸಭೆ ಸದಸ್ಯರಿಗೆ ವಿಪ್ ಜಾರಿ ಮಾಡಿದೆ. ಸದಸ್ಯರು ಕಡ್ಡಾಯವಾಗಿ ಕಲಾಪಕ್ಕೆ ಹಾಜರಾಗಿ ಸರ್ಕಾರದ ಪರವಾಗಿ ನಿರ್ಣಯಕೈಗೊಳ್ಳಬೇಕು ಎಂದು ಸೂಚಿಸಿದೆ.
ಈ ಹಿಂದೆ ಎರಡು ಬಾರಿ ಬಹುಮತವಿಲ್ಲದ ಕಾರಣ ವಿಧೇಯಕ ಅಂಗೀಕಾರ ಆಗಿರಲಿಲ್ಲ. ಸದ್ಯ ಈಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಭಾರೀ ಬಹುಮತವಿದ್ದು, ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು.
ಇನ್ನು ತ್ರಿವಳಿ ತಲಾಖೆ ಮಸೂದೆಯಲ್ಲಿ ಕೆಲವು ಅಂಶಗಳು ಅಸಾಂವಿಧಾನಿಕವಾಗಿವೆ. ಈ ಕರಡು ಕಾನೂನನ್ನು ಇನ್ನಷ್ಟು ಆಳವಾಗಿ ಅವಲೋಕಿಸಬೇಕಾದ ಅಗತ್ಯವಿದೆ. ಹೀಗಾಗಿ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ ಒಳಗೊಂಡಿರುವ ಅಸಾಂವಿಧಾನಿಕ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ ಎಂದು ಈ ಬಾರಿಯೂ ವಿಧೇಯಕಕ್ಕೆ ಪ್ರಾದೇಶಿಕ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ.
\
SCROLL FOR NEXT