ನವದೆಹಲಿ:ಮಾಜಿ ಕೇಂದ್ರ ಸಚಿವರಾದ ಮನೇಕಾ ಗಾಂಧಿ, ರಾಧಾ ಮೋಹನ್ ಸಿಂಗ್ , ವಿರೇಂದ್ರ ಕುಮಾರ್ ಸೇರಿದಂತೆ ಅನೇಕ ಹಿರಿಯ ಬಿಜೆಪಿ ಸಂಸದರು ಸ್ಪೀಕರ್ ಹುದ್ದೆಯ ರೇಸ್ ನಲ್ಲಿದ್ದಾರೆ. ಆದರೆ, ಅಂತಿಮವಾಗಿ ಪಕ್ಷದ ವರಿಷ್ಠರೇ ಈ ಹುದ್ದೆಗೆ ನಂಬಿಕಾರ್ಹರಾದವರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಮಾಜಿ ಕೇಂದ್ರ ಸಚಿವರಾದ ಜುವಲ್ ಒರಾಮ್ ಹಾಗೂ ಎಸ್ ಎಸ್ ಅಹ್ಲುವಾಲಿಯಾ ಅವರ ಹೆಸರು ಕೂಡಾ ಕೇಳಿಬರುತ್ತಿದೆ. ಎಂಟು ಬಾರಿ ಚುನಾಯಿತರಾಗಿರುವ ಮನೇಕಾ ಗಾಂಧಿ ಹೆಚ್ಚಿನ ಅನುಭವ ಹೊಂದಿರುವ ಬಿಜೆಪಿಯ ಸಂಸದೆಯಾಗಿದ್ದು, ಸ್ವಾಭಾವಿಕವಾಗಿ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡುವ ಸಾಧ್ಯತೆ ಇದೆ. ಹದಿನೇಳನೆ ಲೋಕಸಭೆಯಲ್ಲಿ ಹಿರಿಯ ಸಂಸದೆಯಾಗಿರುವ ಮನೇಕಾ ಗಾಂಧಿ ಹಂಗಾಮಿ ಸ್ಪೀಕರ್ ಆಗುವ ಸಾಧ್ಯತೆ ಇದೆ.
ರಾಧಾ ಮೋಹನ್ ಸಿಂಗ್ ಆರು ಬಾರಿ ಸಂಸದರಾಗಿದ್ದು, ಸಂಸತ್ ಬಗ್ಗೆ ಆಳವಾದ ಜ್ಞಾನ ಹೊಂದಿದ್ದು, ಸ್ಪೀಕರ್ ಹೊಣೆಯಾಗಿ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಿಂದಿನ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವರಾಗಿದ್ದ ಅಹ್ಲುವಾಲಿಯಾ ಕೂಡಾ ಶಾಸನೀಯ ವಿಚಾರಗಳಿಗೆ ಸಂಬಂಧಿಸಿದ ಜ್ಞಾನವಿದೆ.
ಬಿಜೆಪಿ ವರಿಷ್ಠರು ದಕ್ಷಿಣ ಭಾರತಕ್ಕೆ ಸೇರಿದವರನ್ನು ಸ್ಪೀಕರ್ ಸ್ಥಾನಕ್ಕೆ ತಂದು ಕೂರಿಸಿದ್ದರೂ ಅಚ್ಚರಿಪಡುವಂತಿಲ್ಲ ಎಂದು ಪಕ್ಷದ ನಾಯಕರ ಒಂದು ಗುಂಪು ಹೇಳುತ್ತಿದೆ. ಈ ಬಾರಿ ಉಪ ಸ್ಪೀಕರ್ ಹುದ್ದೆ ಬಿಜು ಜನತಾ ದಳಕ್ಕೆ ಹೋಗುವ ಸಾಧ್ಯತೆ ಇದ್ದು, ಕಟಕ್ ಸಂಸದ ಭಾರತ್ ರುಹರಿ ಮಹ್ತಾಬ್ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ಮಹ್ತಾಬ್ 2017ರಲ್ಲಿ ಉತ್ತಮ ಸಂಸದೀಯ ಪಟು ಪುರಸ್ಕಾರಕ್ಕೆ ಪಾತ್ರರಾಗಿದ್ದರು.
ಜೂನ್ 17ರಿಂದ ನೂತನ ಲೋಕಸಭೆಯ ಪ್ರಥಮ ಅಧಿವೇಶನ ಆರಂಭವಾಗಲಿದ್ದು, ಜೂನ್ 19 ರಂದು ಸ್ಪೀಕರ್ ಹುದ್ದೆಗಾಗಿ ಚುನಾವಣೆ ನಡೆಯಲಿದೆ.