ದೇಶ

ಶಾಸಕ ಸ್ಥಾನಕ್ಕೆ ಮಹಾ ಹಿರಿಯ ಕಾಂಗ್ರೆಸ್ ನಾಯಕ ವಿಖೆ ಪಾಟೀಲ್ ರಾಜೀನಾಮೆ, ಬಿಜೆಪಿ ಸೇರುವ ಸಾಧ್ಯತೆ

Lingaraj Badiger
ಮುಂಬೈ: ಮಹಾರಾಷ್ಟ್ರ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನಸಭೆ ಮಾಜಿ ಪ್ರತಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಮಂಗಳವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರುವ ಸಾಧ್ಯತೆ ಇದೆ.
ವಿಖೆ ಪಾಟೀಲ್ ಅವರು ಕೆಲ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರಲಿದ್ದಾರೆ ಮತ್ತು ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಇಂದು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಖೆ ಪಾಟೀಲ್ ಅವರ ಪುತ್ರ ಸುಜಯ್ ವಿಖೆ ಪಾಟೀಲ್ ಅವರು ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅಲ್ಲದೆ ಅಹಮ್ಮದನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಜಯ್ ಅವರು ಬರೊಬ್ಬರಿ 2.81 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಪುತ್ರ ಬಿಜೆಪಿ ಸೇರಿದ ನಂತರ ವಿಖೆ ಪಾಟೀಲ್ ಅವರು ಕಳೆದ ಮಾರ್ಚ್ ನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮಗನ ಹಾದಿಯಲ್ಲೇ ಸಾಗಿದ ವಿಖೆ ಪಾಟೀಲ್ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ವಿಖೆ ಪಾಟೀಲ್ ಪಾಟೀಲ್ ಅವರು ವಿಧಾಸಭೆ ಸ್ಪೀಕರ್ ಹರಿಭಾವು ಬಾಗಡೆ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕ ಅಬ್ದುಲ್ ಸತ್ತಾರ್ ಅವರು ಸಹ ಬಿಜೆಪಿ ಸೇರುವುದಾಗಿ ಹೇಳಿದ್ದಾರೆ.
SCROLL FOR NEXT