ದೇಶ

ಕಾಶ್ಮೀರದಲ್ಲಿ ಮತ್ತೆ ಗುಂಡಿನ ಚಕಮಕಿ: ಭದ್ರತಾ ಪಡೆಯ ಗುಂಡಿಗೆ ಇಬ್ಬರು ಉಗ್ರರು ಹತ

Srinivasamurthy VN
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ವಿರುದ್ಧ ಮುಗಿ ಬಿದ್ದ ಸೇನೆ ಇಬ್ಬರು ಉಗ್ರರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.
ದಕ್ಷಿಣ ಕಾಶ‍್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶೋಪಿಯಾನ್ ಜಿಲ್ಲೆಯ ಅವನೀರ್ ಗ್ರಾಮದಲ್ಲಿ ಉಗ್ರರಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ ಜಮ್ಮು-ಕಾಶ್ಮೀರದ ವಿಶೇಷ ಕಾರ್ಯಾಚರಣೆ ತಂಡ, ಸಿಆರ್ ಪಿಎಫ್ ಹಾಗೂ ರಾಷ್ಟ್ರೀಯ ರೈಫಲ್ಸ್ ಪಡೆಗಳು ಇಬ್ಬರು ಉಗ್ರರನ್ನು ಹತಗೊಳಿಸಿದ್ದಾರೆ.
ಕಾರ್ಯಾಚರಣೆ ಸ್ಥಳದಿಂದ ಹೊರಹೋಗುವ ಎಲ್ಲಾ ಸ್ಥಳಗಳನ್ನು ಬಂದ್ ಮಾಡಲಾಗಿದ್ದು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಉಗ್ರರು ಸ್ವಯಂ ಚಾಲಿತ ಶಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಕೂಡ ಪ್ರತಿದಾಳಿ ನಡೆಸಿ ಉಗ್ರರನ್ನು ನಿಗ್ರಹಿಸಿದ್ದಾರೆ.
ಇದುವರೆಗೆ ಇಬ್ಬರು ಉಗ್ರರು ಹತರಾಗಿದ್ದು, ವರದಿ ಬಂದಾಗ ಶೋಧ ಕಾರ್ಯಾಚರಣೆ ಇನ್ನು ಮುಂದುವರೆದಿತ್ತು. ಅವನಿರ್ ಪ್ರದೇಶದ ಸುತ್ತಮುತ್ತ ಪ್ರತಿಭಟನೆಯನ್ನು ತಡೆಯಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಶೋಧ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಶೋಪಿಯಾನ್ ನಲ್ಲಿ ಎಲ್ಲಾ ಮೊಬೈಲ್ ಸೇವೆಗಳನ್ನು ಸ‍್ಥಗಿತಗೊಳಿಸಲಾಗಿದೆ.
SCROLL FOR NEXT