ದೇಶ

ತಾರಕಕ್ಕೇರಿದ ಬಂಗಾಳ ವೈದ್ಯರ ಪ್ರತಿಭಟನೆ, 43 ವೈದ್ಯರಿಂದ ರಾಜಿನಾಮೆ!

Srinivasamurthy VN
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ತಾರಕಕ್ಕೇರಿದ್ದು, ಸರ್ಕಾರದ ಮಧ್ಯ ಪ್ರವೇಶದಿಂದಲೂ ತೃಪ್ತ ರಾಗದ ವೈದ್ಯರು ಇದೀಗ ರಾಜಿನಾಮೆ ನೀಡುವ ಹಂತಕ್ಕೆ ಬಂದಿದ್ದಾರೆ.

ಹೌದು ಶುಕ್ರವಾರ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ ಸುಮಾರು 16 ಹಿರಿಯ ವೈದ್ಯರು ಸೇರಿದಂತೆ ಪಶ್ಚಿಮ ಬಂಗಾಳ ವಿವಿಧೆಡೆಯಿಂದ ಸುಮಾರು 43 ಮಂದಿ ವೈದ್ಯರು ತಮ್ಮ ಸೇವೆಗೆ ರಾಜಿನಾಮೆ ನೀಡುತ್ತಿರುವುದಾಗಿ ಹೇಳಿ ಪತ್ರ ಬರೆದಿದ್ದಾರೆ.  ಪತ್ರದಲ್ಲಿ ಈ ವರೆಗೂ ನಾವು ನಮ್ಮ ಶಕ್ತಿ ಮೀರಿ ಸೇವೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಆಸ್ಪತ್ರೆಯಲ್ಲಿ ಕಾರ್ಯ ಚಟುವಟಿಕೆಗಳ ಮೇಲೆ ಧಕ್ಕೆಯಾಗದಂತೆ ಮುಂಜಾಗ್ರತೆ ವಹಿಸಿದ್ದೆವು, ಆದರೆ ಪ್ರಸ್ತುತ ಪರಿಸ್ಥಿತಿ ತೀವ್ರಗೊಂಡಿದ್ದು, ನಾವು ನಮ್ಮ ಕರ್ತವ್ಯ ಮುಂದುವರೆಸುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ನಾವು ನಮ್ಮ ಸೇವೆಗೆ ರಾಜಿನಾಮೆ ನೀಡುತ್ತಿದ್ದೇವೆ ಎಂದು ವೈದ್ಯರು ಪತ್ರ ಬರೆದಿದ್ದಾರೆ.

ಇನ್ನು ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ 16 ವೈದ್ಯರು ಮಾತ್ರವಲ್ಲದೇ, ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿನ 27 ಮಂದಿ ವೈದ್ಯರೂ ಕೂಡ ತಮ್ಮ ಸೇವೆಗೆ ರಾಜಿನಾಮೆ ನೀಡಿದ್ದಾರೆ. ವೈದ್ಯರು ತಮ್ಮ ರಾಜಿನಾಮೆ ಪತ್ರವನ್ನು ಬಂಗಾಳ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳ ಕಚೇರಿಗೆ ರವಾನಿಸಿದ್ದಾರೆ ಎನ್ನಲಾಗಿದೆ. 

ಪತ್ರದಲ್ಲಿ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ 16 ವೈದ್ಯರು ಸಹಿ ಮಾಡಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ನಿರತರಾಗಿರುವ ಇತರೆ ವೈದ್ಯರೂ ಕೂಡ ಇದೇ ದಾರಿ ಹಿಡಿಯುವ ಆತಂಕ ವ್ಯಕ್ತವಾಗಿದ್ದು, ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ರೋಗಿಗಳು ಮತ್ತು ಅವರ ಸಂಬಂಧಿಕರು ಆಗ್ರಹಿಸಿದ್ದಾರೆ.
ಈ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಮಂಗಳವಾರ ರೋಗಿಯೊಬ್ಬರು ಮೃತಪಟ್ಟಿದ್ದರು. ವೈದ್ಯರ ನಿರ್ಲಕ್ಷದ ಆರೋಪ ಹೊರಿಸಿ ಮೃತರ ಕುಟುಂಬದವರು ಕಿರಿಯ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದನ್ನು ಖಂಡಿಸಿ ವೈದ್ಯರು ನಡೆಸಿದ ಪ್ರತಿಭಟನೆಯಲ್ಲಿ ಆಸ್ಪತ್ರೆಯ ಎಲ್ಲಾ ಹೊರ ಹೋಗಿ ಸೇವೆಯನ್ನು 9 ರಿಂದ 9ರ ವರಗೆ ಸ್ಥಗಿತಗೊಳಿಸಲಾಗಿತ್ತು. 
ಕರ್ತವ್ಯಕ್ಕೆ ಹಾಜರಾಗಿ ಎಂದು ದೀದಿ ಎಚ್ಚರಿಕೆ
ನಾಲ್ಕು ಗಂಟೆಗಳೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರತಿಭಟನಾ ನಿರತ ವೈದ್ಯರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾ ನಿರತ ಕಿರಿಯ ವೈದ್ಯರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಭೇಟಿ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರು. ಆ ಸಂದರ್ಭದಲ್ಲಿ ವೈದ್ಯರು ನ್ಯಾಯ ಬೇಕು ಎಂದು ಘೋಷಣೆ ಕೂಗಿದ್ದಾರೆ.
ವೈದ್ಯರ ಮೇಲೆ ಹಲ್ಲೆ ಖಂಡಿಸಿದ ಕೇಂದ್ರ ಸಚಿವ ಡಾ. ಹರ್ಷವರ್ದನ್
ವೈದ್ಯರ ಮೇಲೆ ಇತ್ತೀಚೆಗೆ ನಡೆದ ಹಿಂಸಾಚಾರಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಹರ್ಷವರ್ಧನ್ ಖಂಡಿಸಿದ್ದು, ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 'ವೈದ್ಯರು ಸುರಕ್ಷಿತ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಇದು ಬಹಳ ಮುಖ್ಯ ಕೂಡ. ಹಿಂಸಾಚಾರ ನಡೆದಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು, ಇದರಿಂದ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ನಿಯಂತ್ರಿಸಬಹುದು. ವೈದ್ಯರುಗಳು ಸಮಾಜದ ಅವಿಭಾಜ್ಯ ಆಧಾರ ಸ್ತಂಭ. ಸದಾ ಒತ್ತಡ ಹಾಗೂ ವಿಭಿನ್ನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಅವರ ವಿರುದ್ಧ ಹಿಂಸಾಚಾರದಂತಹ ಘಟನೆಗಳನ್ನು ನಿಲ್ಲಿಸುವಂತೆ ರೋಗಿಗಳು ಹಾಗೂ ಅವರ ಆರೈಕೆ ಮಾಡುವ ಪೋಷಕರು, ಬಂಧುಮಿತ್ರರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
SCROLL FOR NEXT