ದೇಶ

ನಿಪಾಹ್ ಆಯ್ತು, ಈಗ 'ಎಇಎಸ್' ಮರಣ ಮೃದಂಗ; ವೈರಾಣು ಸೋಂಕಿಗೆ ಬಿಹಾರದಲ್ಲಿ 69 ಬಲಿ

Srinivasamurthy VN
ಪಾಟ್ನಾ: ಕೇರಳದಲ್ಲಿನ ನಿಪಾಹ್ ವೈರಸ್ ಸೋಂಕು ದುರಂತ ಹಸಿರಾಗಿರುವಂತೆಯೇ ಅತ್ತ ಬಿಹಾರದಲ್ಲಿ 'ಎಇಎಸ್' ಸೋಂಕಿಗೆ ಸುಮಾರು 69 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಯುಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಎಂಬ ವೈರಾಣು ಸೊಂಕಿಗೆ ಬಿಹಾರದಲ್ಲಿ ಈ ವರೆಗೂ 69 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಮುಜಾಫರ್ ಪುರದ ತಜ್ಞ ವೈದ್ಯ ಡಾ.ಶೈಲೇಶ್ ಪ್ರಸಾದ್ ಸಿಂಗ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, ಎಇಎಸ್ ಸೋಂಕಿಗೆ ಈ ವರೆಗೂ ಬಿಹಾರದಲ್ಲಿ 69 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜುವೊಂದರಲ್ಲೇ 58ಮಂದಿ ಸಾವನ್ನಪ್ಪಿದ್ದು, ಕೇಜ್ರಿವಾಲ್ ಆಸ್ಪತ್ರೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
2012ರ ಜೂನ್​ನಲ್ಲಿ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಪಾಟ್ನಾದಲ್ಲಿ ಉಲ್ಬಣಿಸಿ ಮೂರೇ ದಿನದಲ್ಲಿ 109ಕ್ಕೂ ಅಧಿಕ ಮಕ್ಕಳನ್ನು ಬಲಿ ತೆಗೆದುಕೊಂಡಿತ್ತು. ರೋಗ ವ್ಯಾಪಿಸಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಟ್ಟೆಚ್ಚರ ವಹಿಸಲಾಗಿದೆ.
ಎಇಎಸ್ ಎಂಬುದು ಅಕ್ಯುಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ ನ ಸಂಕ್ಷಿಪ್ತ ರೂಪ. ಇದು ಒಂದು ವೈರಾಣು ಸೋಂಕಾಗಿದ್ದು, ಮಿದುಳು ಸಂಬಂಧಿತ ಸಮಸ್ಯೆಗಳನ್ನು ತರುತ್ತದೆ. ಸಾಮಾನ್ಯವಾಗಿ ಈ ಎಇಎಸ್ ಸಮಸ್ಯೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸೋಂಕಿಗೆ ಪ್ರಮುಖ ಕಾರಣ ಕಡಿಮೆ ರೋಗ ನಿರೋಧಕ ಶಕ್ತಿ, ಈ ಎಇಎಸ್ ಸೋಂಕು ಕಾಣಿಸಿಕೊಂಡ ರೋಗಿಯಲ್ಲಿ ಜ್ವರ, ಅತಿಯಾದ ತಲೆನೋವು, ಶೀತ, ವಾಂತಿ, ಕತ್ತು ನೋವು ಸಾಮಾನ್ಯ. ರೋಗ ತೀವ್ರಗೊಂಡರೆ ಈ ಸಮಸ್ಯೆಗಳ ಜೊತೆ ಜೊತೆಗೇ ಮರೆಗುಳಿತನ, ಕಿವಿ ಕೇಳದಿರುವಿಕೆ, ತೊದಲುವಿಕೆ, ಭ್ರಮೆ, ನೆನಪಿನ ಶಕ್ತಿ ಕುಂದುವುದು, ಅರೆನಿದ್ರಾವಸ್ಥೆಯಂತಹ ಸಮಸ್ಯೆಗಳು ಬಾಧಿಸುತ್ತವೆ. ಇನ್ನೂ ರೋಗ ಗಂಭೀರವಾದರೆ ರೋಗಿ ಕೋಮಾ ಸ್ಥಿತಿ ಕೂಡ ತಲುಪಬಹುದು ಎಂದು ವೈದ್ಯರು ಹೇಳಿದ್ದಾರೆ.
SCROLL FOR NEXT