ನವದೆಹಲಿ: ಸುದೀರ್ಘ 30 ವರ್ಷಗಳಿಂದ ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅವಧಿ ಶುಕ್ರವಾರ ಅಂತ್ಯವಾಗಿದ್ದು, ಮತ್ತೊಬ್ಬ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಇತ್ತೀಚಿಗೆ ಮುಕ್ತಾಯವಾದ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಸಂಸತ್ ಬಜೆಟ್ ಅಧಿವೇಶನದಲ್ಲಿ ಮಾಜಿ ಪ್ರಧಾನಿಗಳ ಅನುಪಸ್ಥಿತಿ ಎದ್ದು ಕಾಣಲಿದೆ.
17ನೇ ಲೋಕಸಭೆಯ ಮೊದಲ ಬಜೆಟ್ ಅಧಿವೇಶನ ಇದೇ ಜೂನ್ 17ರಿಂದ ಆರಂಭವಾಗುತ್ತಿದ್ದು, ಜೂನ್ 1996ರಿಂದ ಏಪ್ರಿಲ್ 1997ರ ವರೆಗೆ ದೇಶದ 11ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ದೇವೇಗೌಡ ಅವರು ತುಮಕೂರಿನಲ್ಲಿ ಬಿಜೆಪಿಯ ಜಿಎಸ್ ಬಸವರಾಜ್ ಅವರ ವಿರುದ್ಧ 13 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಈ ಮುಂಚೆ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ದೇವೇಗೌಡ ಅವರು ಈ ಬಾರಿ ತಮ್ಮ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟು, ತಾವು ತುಮಕೂರಿನಿಂದ ಸ್ಪರ್ಧಿಸಿದ್ದರು.
ನನಗೆ ಸೋಲು ಇದೇ ಮೊದಲೇನಲ್ಲ. ನಾನು ಒಬ್ಬ ಮಾಜಿ ಪ್ರಧಾನಿಯಾಗಿ ಎರಡು ಬಾರಿ ಸೋತಿದ್ದೇನೆ. ಇದು ದೊಡ್ಡ ವಿಚಾರವೇ ಅಲ್ಲ. ಆದರೆ ಪ್ರಾದೇಶಿಕ ಪಕ್ಷಗಳನ್ನು ಉಳಿಸುವುದು ಹೇಗೆ ಎಂಬುದು ನನ್ನ ಚಿಂತೆಯಾಗಿದೆ ಎಂದು ಸೋಲಿನ ಬಳಿಕ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದರು.
ಇನ್ನು 2004ರಿಂದ 2014ರ ವರೆಗೆ ಸತತ ಎರಡು ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ರಾಜ್ಯಸಭಾ ಅವಧಿ ಶುಕ್ರವಾರ ಅಂತ್ಯಗೊಂಡಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ನ ಕಳಪೆ ಸಾಧನೆಯಿಂದ ಅವರು ಮರು ಆಯ್ಕೆಯಾಗಲು ಸಾಧ್ಯವಾಗಿಲ್ಲ.
ಮಾಜಿ ಪ್ರಧಾನಿ ಸಿಂಗ್ ಅವರು ಅಸ್ಸಾಂ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದರು. ಆದರೆ ಈ ಬಾರಿ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ 25 ಸ್ಥಾನಗಳನ್ನು ಹೊಂದಿದ್ದು, ಸಿಂಗ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲು 43 ಸ್ಥಾನಗಳ ಅಗತ್ಯವಿದೆ. ಅಲ್ಲದೆ ಇತರೆ ರಾಜ್ಯಗಳಲ್ಲಿ ಯಾವುದೇ ರಾಜ್ಯಸಭಾ ಸ್ಥಾನ ಖಾಲಿ ಇಲ್ಲದ ಕಾರಣ ಅವರ ಮರು ಆಯ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಮಾಜಿ ಪ್ರಧಾನಿಗಳ ಅನುಪಸ್ಥಿತಿ ಕಾಡಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos