ದೇಶ

ಮುಗಿಲು ಮುಟ್ಟಿದ್ದ ವೈದ್ಯರ ಆಕ್ರೋಶ, ಬಂಗಾಳದಲ್ಲಿ 450ಕ್ಕೂ ಹೆಚ್ಚು ವೈದ್ಯರ ರಾಜಿನಾಮೆ

Srinivasamurthy VN
ಕೋಲ್ಕತ್ತಾ: ಕಳೆದ ನಾಲ್ಕು ದಿನಗಳಿಂದ ಬಂಗಾಳದಲ್ಲಿ ಮುಷ್ಕರ ನಡೆಸುತ್ತಿರುವ ವೈದ್ಯರ ಆಕ್ರೋಶ ಮುಗಿಲು ಮುಟ್ಟಿದ್ದು, ಈ ವರೆಗೂ ಸುಮಾರು 450ಕ್ಕೂ ಹೆಚ್ಚು ವೈದ್ಯ ರಾಜಿನಾಮೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಮುಂದುವರೆದಿರುವಂತೆಯೇ ವೈದ್ಯರ ರಾಜಿನಾಮೆ ಪರ್ವ ಕೂಡ ಮುಂದುವರೆದಿದೆ. ನಿನ್ನೆಯಿಂದ ಈ ವರೆಗೂ ಬಂಗಾಳದಾದ್ಯಂತ ಸುಮಾರು 450ಕ್ಕೂ ಹೆಚ್ಚು ವೈದ್ಯರ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯ, ವೈದ್ಯರ ಸಮಸ್ಯೆಗಳು, ಸಿಬ್ಬಂದಿ ಕೊರತೆಯ ಹೊರತಾಗಿಯೂ ನಾವು ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಅದಾಗ್ಯೂ ವೈದ್ಯರ ಮೇಲಿನ ಮಾರಣಾಂತಿಕ ಹಲ್ಲೆ ನಮ್ಮ ಧೈರ್ಯವನ್ನೇ ಹಾಳುಗೆಡವಿದೆ. ಹೀಗಾಗಿ ವೈದ್ಯರ ಭದ್ರತೆಗೆ ಸರ್ಕಾರ ಶಾಶ್ವತ ಕ್ರಮ ಕೈಗೊಳ್ಳುವವರೆಗೂ ನಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿ ಬರೊಬ್ಬರಿ 450ಕ್ಕೂ ಹೆಚ್ಚು ವೈದ್ಯರು ರಾಜಿನಾಮೆ ನೀಡಿದ್ದಾರೆ.
ವೈದ್ಯರ ರಾಜಿನಾಮೆಗೆ ಸಿಎಂ ಮಮತಾ ಬ್ಯಾನರ್ಜಿ ಅವರ ನಡೆ ಕೂಡ ಕಾರಣ ಎಂದು ಹೇಳಲಾಗುತ್ತಿದ್ದು, ವೈದ್ಯರ ಬಗ್ಗೆ ಕೀಳಾಗಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರೇ ಎನ್ ಆರ್ ಎಸ್ ಆಸ್ಪತ್ರೆಗೆ ಬಂದು ನಮ್ಮನ್ನು ಭೇಟಿ ಮಾಡಬೇಕು, ಕ್ಷಮೆ ಕೇಳಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.
ಶುಕ್ರವಾರ ಕೋಲ್ಕತ್ತದ ಎಸ್ ಎಸ್ ಕೆಎಂ ಆಸ್ಪತ್ರೆಗೆ ತೆರಳಿದ್ದ ಮಮತಾ ಬ್ಯಾನರ್ಜಿ, "ವೈದ್ಯರನ್ನು ಸಂಧಾನಕ್ಕೆ ಕರೆದರೆ ಅವರು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಆದರೂ ನಾನು ಅವರನ್ನು ಕ್ಷಮಿಸಿದ್ದೇನೆ. ಪ್ರತಿಭಟನೆ ಮಾಡುತ್ತಿರುವವ ವೈದ್ಯರೆಲ್ಲ ಬಂಗಾಳದವರಲ್ಲ. ಅವರೆಲ್ಲ ಹೊರಗಿನಿಂದ ಬಂದವರು. ರಾಜ್ಯದಲ್ಲಿ ಶಾಂತಿ ಕದಡಲು ಬಿಜಿಪಿ ಮತ್ತು ಸಿಪಿಎಂ ಮಾಡುತ್ತಿರುವ ಕುತಂತ್ರ ಇದು" ಎಂದು ಆರೋಪಿಸಿದ್ದರು.
ಹಿನ್ನೆಲೆ ಏನು?
ಜೂನ್ 10 ರಂದು 80 ವರ್ಷ ವಯಸ್ಸಿನ ರೋಗಿಯೊಬ್ಬರನ್ನು ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆದರೆ ಅವರ ಸಾವಿಗೆ ಕಿರಿಯ ವೈದ್ಯರೊಬ್ಬರ ನಿರ್ಲಕ್ಶ್ಯವೇ ಕಾರಣ ಎಂದು ದೂರಿ, ರೋಗಿಯ ಸಂಬಂಧಿಗಳು ಪರಿಬೊನೊ ಮುಖರ್ಜಿ ಎಂಬ ವೈದ್ಯರ ಮೇಲೆ ದಾಳಿ ನಡೆಸಿದ್ದರು. ಇದರಿಂದಾಗಿ ತೀವ್ರವಾಗಿ ಗಾಯಗೊಂಡ ವೈದ್ಯರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಸಹಜವಾಗಿ ಸಂಭವಿಸಿದ ಘಟನೆಗೆ, ವೈದ್ಯರನ್ನು ಹೊಣೆಯಾಗಿಸುವುದು ಸರಿಯಲ್ಲ, ಆಸ್ಪತ್ರೆಯ ಹಾಸ್ಟೆಲ್ ಆವರಣದಲ್ಲೇ ವೈದ್ಯರ ಮೇಲೆ ದಾಳಿ ನಡೆಯುತ್ತಿದ್ದರೂ ವೈದ್ಯರ ರಕ್ಷಣೆಗೆ ಯಾರೂ ಇರಲಿಲ್ಲ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಭದ್ರತೆ ಒದಗಿಸಬೇಕು ಎಂಬುದು ವೈದ್ಯರ ಒತ್ತಾಯ.
SCROLL FOR NEXT