ದೇಶ

ಕೇರಳ ಪೋಲೀಸ್ ಅಧಿಕಾರಿ ಹತ್ಯೆ: ಪ್ರೀತಿ ನಿರಾಕರಿಸಿ ವಾಟ್ಸಪ್ ಬ್ಲಾಕ್ ಮಾಡಿದ್ದಕ್ಕೆ ನಡುಬೀದಿಯಲ್ಲಿ ಬೆಂಕಿ ಹಚ್ಚಿ ಕೊಂದ!

Raghavendra Adiga
ಅಲಪ್ಪುಳ: ಕೇರಳ ಮಹಿಳಾ ಪೋಲೀಸ್ ಅಧಿಕಾರಿಯನ್ನು ನಡುಬೀದಿಯಲ್ಲೇ ಬೆಂಕಿ ಹಚ್ಚಿ ಕೊಂದ ಆರೋಪಿಯನ್ನು ಪೋಲೀಸರು ಬಂಧಿಸಿದ್ದು ಘಟನೆ ಹಿಂದೆ ಪ್ರೇಮ ವೈಫಲ್ಯದ ಕಹಿ ಇರುವುದು ಪತ್ತೆಯಾಗಿದೆ.
ಶನಿವಾರ ಬೆಳಗ್ಗೆ ಕೇರಳದ ಅಲಪ್ಪುಳ ಜಿಲ್ಲೆ ವಲ್ಲಿಕುನ್ನಂ ಬಳಿಯ ಕಾಂಜಿಪುಳ ಎಂಬಲ್ಲಿ ನಡೆದಿದ್ದ ಸೌಮ್ಯ ಪುಷ್ಪಾಕರನ್(30)  ಹತ್ಯೆ ಪ್ರಕರಣ ಬೇಧಿಸಿರುವ ಪೋಲೀಸರು ಆರೋಪಿ ಏಜಾಜ್ ಸೌಮ್ಯ  ಅವರನ್ನು ಪ್ರೀತಿಸುತ್ತಿದ್ದು ಈ ಪ್ರೀತಿಗೆ ಸೌಮ್ಯ ಒಪ್ಪಿಲ್ಲದಿರುವುದೇ ಕಾರಣವಾಗಿದೆ ಎಂದಿದ್ದಾರೆ.
ಘಟನೆ ವಿವರ
ಏಜಾಜ್ ಹಾಗೂ ಸೌಮ್ಯ ಮೂರು ವರ್ಷಗಳಿಂದ ಸ್ನೇಹಿತರು. ಆದರೆ ಈ ಸ್ನೇಹ ತನ್ನ ಕುಟುಂಬದಲ್ಲಿ ಸಮಸ್ಯೆ ತಂದೊಡ್ಡಲಿದೆ ಎಂದು ಅರಿತ ಸೌಮ್ಯ ಆತನಿಂದ ದೂರಾಗಿದ್ದರು. ಅಲ್ಲದೆ ಆಕೆ ಅದಾಗಲೇ ವಿವಾಹವಾಗಿದ್ದು ಮೂವರು ಮಕ್ಕಳ ತಾಯಿಯಾಗಿದ್ದರೂ ಆತ ಅವಳ ಪತಿಯನ್ನು ತೊರೆದು ತನ್ನನ್ನು ವಿವಾಹವಾಗುವಂತೆ ಪೀಡಿಸಿದ್ದನೆನ್ನಲಾಗಿದೆ.
ಸೌಮ್ಯ ಏಜಾಜ್ ಕೋರಿಕೆಯನ್ನು ನಿರಾಕರಿಸಿದ್ದಾರೆ  ಅಲ್ಲದೆ ಆತನನ್ನು ನಿರ್ಲಕ್ಷಿಸಿದ್ದರು, ಅವನ ವಾಟ್ಸ್ ಅಪ್ ನಂಬರ್ ಅನ್ನೂ ಬ್ಲಾಕ್ ಮಾಡಿದ್ದರು.ಇದರಿಂದ ಕೆರಳಿದ ಏಜಾಜ್ ಶನಿವಾರ ರಸ್ತೆ ನಡುವೆಯೇ ಸೌಮ್ಯ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾನೆ.
ಇನ್ನು ಸೌಮ್ಯ ಹಾಗೂ ಏಜಾಜ್  ನಡುವಿನ ಸ್ನೇಹದ ಕುರಿತು ಸೌಮ್ಯ ತಾಯಿಗೆ ಸಹ ತಿಳಿದಿತ್ತು.ಸೌಮ್ಯ ಎಲ್ಲಾ ವಿಷಯಗಳನ್ನು ತನ್ನ ತಾಯಿ ಇಂದಿರಾ ಬಳಿ ಹಂಚಿಕೊಂಡಿದ್ದರೆಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಸೌಮ್ಯ ಪೋಲೀಸ್ ಇಲಾಖೆಗೆ ಸೇರಿ ತರಬೇತಿಗಾಗಿ ತ್ರಿಶೂರ್ ಪೋಲೀಸ್ ಅಕಾಡಮಿಗೆ ಸೇರಿದಾಗಲೇ ಏಜಾಜ್ ಪರಿಚಯವಾಗಿದ್ದ. ಆ ನಂತರ ಇಬ್ಬರೂ ಫೇಸ್ ಬುಕ್, ವಾಟ್ಸ್ ಅಪ್ ಮೂಲಕ ಸ್ನೇಹವನ್ನು ಗಟ್ಟಿ ಮಾಡಿಕೊಂಡಿದ್ದರು. ಕೆಲ ಕಾಲ ಅವರಿಬ್ಬರ ನಡುವೆ ಹಣಕಾಸಿನವ್ಯವಹಾರವೂ ನಡೆದಿರುವುದು ಅವರ ತಾಯಿಗೂ ತಿಳಿದಿದೆ.ಇನ್ನು ಸೌಲ್ಮ ಅವರನ್ನು ಹತ್ಯೆ ಮಾಡಲು ಏಜಾಜ್  ಹಿಂದೊಮ್ಮೆ ಸಹ ಯತ್ನಿಸಿದ್ದ.
"ಏಜಾಜ್  ಈ ಹಿಂದೆಯೂ ದೇ ರೀತಿ ಮಾಡಿದ್ದ. ಒಂದು ಬಾರಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆನ್ನಿಗೆ ಶೂನಿಂದ ಹೊಡೆದಿದ್ದ.  ಆಗ ನಾನು ಅವರಿಬ್ಬರ ನಡುವಿನ ಮನಸ್ತಾಪ ಬಗೆಹರಿಸಲು ಪ್ರಯತ್ನಿಸಿದ್ದೆ, ಆದರೆ ಸೌಮ್ಯ ನಮ್ಮಿಬರ ನಡುವೆ ಮೂರನೆಯವರು ಬಂದರೆ ಸಮಸ್ಯೆ ಬಿಗಡಾಯಿಸಬಹುದೆಂದು ಹೆದರಿದ್ದಳು. ಹಾಗಾಗಿ ಅವಳು ಸಹ ಸುಮ್ಮನಾಗಿದ್ದಳು. ಆದರೆ ಈಗ ಪಾಪಿಯ ಕೃತ್ಯಕ್ಕೆ ನನ್ನ ಮಗಳು ಬಲಿಯಾಗಿದ್ದಾಳೆ" ಇಂದಿರಾ ಹೇಳಿದ್ದಾರೆ.
ಸೌಮ್ಯ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ತಾಯಿ ಟೈಲರಿಂಗ್ ವೃತ್ತಿ ಮಾಡಿ ಮಕ್ಕಳನ್ನು ಸಾಕಿದ್ದಾರೆ. ಸೌಮ್ಯ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಸೌಮ್ಯಗೆ ಮೂವರು ಮಕ್ಕಳಿದ್ದಾರೆ.
ಇನ್ನು ಸೌಮ್ಯಳಿಗೆ ಬೆಂಕಿ ಹಚ್ಚಿ ಕೊಂದ ಆರೋಪಿ ಏಜಾಜ್  ತಾನೂ ಆತ್ಮಹತ್ಯೆಗೆ ಯತ್ನಿಸಿ ಬೆಂಕಿ ಹಚ್ಚಿಕೊಂಡಿದ್ದ. ಆತನಿಗೆ ಶೇ. 50 ರಷ್ಟು ಸುಟ್ಟ ಗಾಯಗಳಾಗಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು. 
SCROLL FOR NEXT