ದೇಶ

ಮುಜಫರ್ ಪುರ: ತೀವ್ರ ಮಿದುಳು ಜ್ವರದಿಂದ ಮೃತಪಟ್ಟ ಮಕ್ಕಳ ಸಂಖ್ಯೆ 112ಕ್ಕೆ ಏರಿಕೆ

Sumana Upadhyaya
ಪಾಟ್ನಾ: ಬಿಹಾರ ರಾಜ್ಯದ ಮುಜಫರ್ ಪುರ ಜಿಲ್ಲೆಯಲ್ಲಿ ಅಕ್ಯೂಟ್ ಎನ್ಸಾಫಾಲಿಟೀಸ್ ಸಿಂಡ್ರೋಮ್ ಎಂಬ ತೀವ್ರ ಮಿದುಳು ಜ್ವರದಿಂದ ಮೃತಪಟ್ಟವರ ಸಂಖ್ಯೆ ಬುಧವಾರ 112ಕ್ಕೇರಿದೆ.
ಸುಮಾರು 93 ಮಕ್ಕಳು ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರೆ, 19 ಮಕ್ಕಳು ಕೇಜ್ರಿವಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ, ಮುಖ್ಯಮಂತ್ರಿ ನಿತೀಶ್ ಕುಮಾರ್‌ ನಿನ್ನೆ ಶ್ರೀಕೃಷ್ಣ ಮೆಡಿಕಲ್ ಕಾಲೇಜ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. 
ಮಿದುಳು ಜ್ವರದಿಂದ ಮೃತಪಟ್ಟ ಮಕ್ಕಳ ಕುಟುಂಬದವರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ. ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಂತೆ ಅವರು ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮತ್ತು ವೈದ್ಯರಿಗೆ ಸೂಚಿಸಿದ್ದಾರೆ. 
ಈ ಮಧ್ಯೆ, ಮಕ್ಕಳ ಸಾವಿನ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೇಂದ್ರ ಆರೋಗ್ಯ ಸಚಿವಾಲಯದಿಂದ ವರದಿ ಕೇಳಿದೆ. ಆಸ್ಪತ್ರೆಗೆ ದಾಖಲಾಗಿರುವವರು, ನೀಡಲಾಗುತ್ತಿರುವ ಚಿಕಿತ್ಸೆ, ದುಃಖತಪ್ತ ಕುಟುಂಬಗಳಿಗೆ ಸರಕಾರ ಒದಗಿಸಿದ ಪರಿಹಾರ, ನೆರವುಗಳ ಕುರಿತು ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗ ಕೇಳಿದೆ. ನಾಲ್ಕು ವಾರಗಳೊಳಗೆ ಉತ್ತರ ನಿರೀಕ್ಷಿಸುವುದಾಗಿಯೂ ಹೇಳಿದೆ. 
ಮಾಹಿತಿ ಪ್ರಕಾರ, ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇನ್ನೂ 290 ಮಕ್ಕಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಅಕ್ಯೂಟ್ ಎನ್ಸಿಫಾಲಿಟಿಸ್ ಸಿಂಡ್ರೋಮ್ ಫ್ಲೂ ರೀತಿಯ ಲಕ್ಷಣವಾಗಿದ್ದು ಇದರಲ್ಲಿ ಅಧಿಕ ಜ್ವರ, ಸೆಳೆತ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.
SCROLL FOR NEXT