ದೇಶ

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆ ಪರಾಮರ್ಶಿಸಿದ ಅಮಿತ್ ಶಾ

Nagaraja AB
ಜಮ್ಮು-ಕಾಶ್ಮೀರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಮ್ಮು- ಕಾಶ್ಮೀರಕ್ಕೆ ಹೆಚ್ಚಿನ  ಒತ್ತು ನೀಡುತ್ತಿದ್ದು, ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಣಿವೆ ರಾಜ್ಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿ, ಭದ್ರತಾ ವ್ಯವಸ್ಥೆಯನ್ನು ಪರಾಮರ್ಶೆ ನಡೆಸಿದರು.
ಶಿಷ್ಟಾಚಾರವನ್ನು ಬದಿಗೊತ್ತಿದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ಅವರ ಸಲಹೆಗಾರರು ಹಾಗೂ ಕೆಲ ಉನ್ನತ ಮಟ್ಟದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ಅವರನ್ನು ಬರಮಾಡಿಕೊಂಡರು. ರಾಜ್ಯಪಾಲರು ಸಾಮಾನ್ಯವಾಗಿ ಪ್ರಧಾನಿ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತ್ರ ಬರಮಾಡಿಕೊಳ್ಳುವ ವಾಡಿಕೆಯಿದೆ.
ಎರಡು ದಿನಗಳ ಭೇಟಿ ನೀಡಿರುವ ಅಮಿತ್ ಶಾ, ನಾಗರಿಕ ಆಡಳಿತಾಧಿಕಾರಿಗಳು ಹಾಗೂ ಭದ್ರತಾ ಏಜೆನ್ಸಿಯ ವಿವಿಧ ಉನ್ನತ ಅಧಿಕಾರಿಗಳೊಂದಿಗೆ  ಉನ್ನತ ಮಟ್ಟದ ಸಭೆ ನಡೆಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪುಲ್ವಾಮಾ ದಾಳಿ ಬಳಿಕ ಜಮ್ಮು ಕಾಶ್ಮೀರದಲ್ಲಿನ ಒಟ್ಟಾರೇ ಭದ್ರತಾ ವ್ಯವಸ್ಥೆಯನ್ನು  ಪರಿಶೀಲಿಸಿದ ಅಮಿತ್ ಶಾ, ಜುಲೈ 1 ರಿಂದ ಪ್ರಾರಂಭವಾಗಲಿರುವ ವಾರ್ಷಿಕ ಅಮರಾನಾಥ ಯಾತ್ರೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಮಿತ್ ಶಾ ಸೂಚಿಸಿದರು ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿನ ಪವಿತ್ರ ಅಮರನಾಥ ದೇವಾಲಯಕ್ಕೆ ಗೃಹ ಸಚಿವರು ಭೇಟಿ ನೀಡುವ ಸಾಧ್ಯತೆ ಇದೆ. ಉಗ್ರರ ದಾಳಿಯಿಂದಾಗಿ ಹುತಾತ್ಮರಾದ ಪೊಲೀಸರ ಕುಟುಂಬ ಸದಸ್ಯರನ್ನು ಅಮಿತ್ ಶಾ ಭೇಟಿ ಮಾಡಲಿದ್ದಾರೆ ಎಂಬುದು ತಿಳಿದುಬಂದಿದೆ.
SCROLL FOR NEXT