ದೇಶ

ತಾತ ಪಿ.ವಿ.ನರಸಿಂಹ ರಾವ್ ಅವರಿಗೆ ಮಾಡಿರುವ ಅನ್ಯಾಯಕ್ಕೆ ಸೋನಿಯಾ, ರಾಹುಲ್ ಕ್ಷಮೆ ಕೇಳಬೇಕು: ಎನ್ ವಿ ಸುಭಾಷ್

Sumana Upadhyaya
ಹೈದರಾಬಾದ್: ಮಾಜಿ ಪ್ರಧಾನಿ ದಿವಂಗತ ಪಿ ವಿ ನರಸಿಂಹ ರಾವ್ ವಿರುದ್ಧ ಆರೋಪ ಮಾಡಿದ ಹಿರಿಯ ಕಾಂಗ್ರೆಸ್ ನಾಯಕ ಜಿ ಚಿನ್ನಾ ರೆಡ್ಡಿ ಅವರಿಗೆ ತಿರುಗೇಟು ನೀಡಿದ ನರಸಿಂಹ ರಾವ್ ಅವರ ಮೊಮ್ಮಗ ತಮ್ಮ ತಾತನಿಗೆ ಗಾಂಧಿ ಕುಟುಂಬ ಮಾಡಿರುವ ಅನ್ಯಾಯಕ್ಕೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. 
ತಮ್ಮ ಅಧಿಕಾರಾವಧಿಯಲ್ಲಿ ನರಸಿಂಹ ರಾವ್ ಅವರು ಗಾಂಧಿ-ನೆಹರು ಕುಟುಂಬವನ್ನು ನಿರ್ಲಕ್ಷ್ಯ ಮಾಡಲು ನೋಡುತ್ತಿದ್ದರು ಎಂದು ಎಐಸಿಸಿ ಕಾರ್ಯದರ್ಶಿ ಜಿ ಚಿನ್ನಾ ರೆಡ್ಡಿ ಮಾಡಿರುವ ಆರೋಪ ಸತ್ಯವಲ್ಲ ಮತ್ತು ಅಂತಹ ಮಾತು ಖಂಡನೀಯ ಎಂದು ಪಿ ವಿ ನರಸಿಂಹ ರಾವ್ ಅವರ ಮೊಮ್ಮಗ ಎನ್ ವಿ ಸುಭಾಷ್ ಹೇಳಿದ್ದಾರೆ.
ತಮ್ಮ ತಾತ ನರಸಿಂಹ ರಾವ್ ಅವರು ಗಾಂಧಿ ಕುಟುಂಬದ ಅತ್ಯಂತ ನಂಬಿಕಸ್ಥ ಮತ್ತು ವಿಧೇಯ ನಾಯಕ, ಗಾಂಧಿ-ನೆಹರು ಕುಟುಂಬದವರಿಗೆ ಅನೇಕ ಸಂದರ್ಭಗಳಲ್ಲಿ ಮಾರ್ಗದರ್ಶನ ಕೂಡ ನೀಡಿದ್ದಾರೆ ಎಂದರು.
2014ರಲ್ಲಿ ಬಿಜೆಪಿ ಸೇರಿದ ಪಿ ವಿ ನರಸಿಂಹ ರಾವ್ ಮೊಮ್ಮಗ ಸುಭಾಷ್ ಬಿಜೆಪಿಯ ತೆಲಂಗಾಣ ಘಟಕದ ಅಧಿಕೃತ ವಕ್ತಾರರಾಗಿದ್ದಾರೆ.
ನೆಹರೂ-ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಬೇರೆ ನಾಯಕರನ್ನು ಕಾಂಗ್ರೆಸ್ ನಲ್ಲಿ ಯಾವತ್ತಿಗೂ ಕಡೆಗಣಿಸಲಾಗುತ್ತಿತ್ತು. ಅದರಲ್ಲೂ ಪಿ ವಿ ನರಸಿಂಹ ರಾವ್ ಅವರಿಗೆ ಕಾಂಗ್ರೆಸ್ ನಲ್ಲಿ ಗಾಂಧಿ ಕುಟುಂಬದವರಿಂದ ಅನ್ಯಾಯವಾಗಿದೆ. ಅವರು ತೀರಿಕೊಂಡಾಗ ಅವರ ಮೃತದೇಹವನ್ನು ದೆಹಲಿಯ ಎಐಸಿಸಿ ಕಚೇರಿಗೆ ಸಹ ತೆಗೆದುಕೊಂಡು ಹೋಗಲು ಬಿಟ್ಟಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ ಎಂದು ಸುಭಾಷ್ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ದೆಹಲಿಯಲ್ಲಿ ಎಲ್ಲಾ ಮಾಜಿ ಪ್ರಧಾನಿಗಳಲ್ಲಿ ನಿಧನ ಹೊಂದಿದವರ ಸ್ಮಾರಕ ನಿರ್ಮಿಸಲಾಗಿದೆ. ಆದರೆ ನರಸಿಂಹ ರಾವ್ ಅವರದ್ದು ಇಲ್ಲ, ಇದರಿಂದಲೇ ಕಾಂಗ್ರೆಸ್ ನಾಯಕರ ಬೇಧಭಾವ ಮನೋಧರ್ಮ ಗೊತ್ತಾಗುತ್ತದೆ. ಆದರೆ ನರಸಿಂಹ ರಾವ್ ಅವರು ಪ್ರಧಾನಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ಯಾವತ್ತಿಗೂ ಗಾಂಧಿ ಕುಟುಂಬದವರನ್ನು ಅಸಡ್ಡೆಯಿಂದ, ನಿರ್ಲಕ್ಷ್ಯದಿಂದ ನೋಡುತ್ತಿರಲಿಲ್ಲ ಎಂದರು.
ಹಲವು ಸಂದರ್ಭಗಳಲ್ಲಿ ನರಸಿಂಹ ರಾವ್ ಅವರೇ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಪಕ್ಷದ ಚಟುವಟಿಕೆಗಳು, ಅಭಿವೃದ್ಧಿಪರ ಕ್ರಮಗಳು, ಸಂಪುಟ ವಿಸ್ತರಣೆ, ಚುನಾವಣೆ ಪ್ರಕ್ರಿಯೆ, ಪ್ರಚಾರ, ಟಿಕೆಟ್ ಹಂಚಿಕೆ ಇತ್ಯಾದಿಗಳ ಬಗ್ಗೆ ವಿವರಿಸುತ್ತಿದ್ದರು. ಆದರೆ ಸೋನಿಯಾ ಗಾಂಧಿಯವರಿಗೆ ಆ ಸಂದರ್ಭದಲ್ಲಿ ರಾಜಕೀಯಕ್ಕೆ ಬರಲು ಆಸಕ್ತಿ ಇರಲಿಲ್ಲ, ತಮ್ಮ ಮಕ್ಕಳನ್ನು ಸಹ ರಾಜಕೀಯಕ್ಕೆ ಕರೆತರುವ ಇಂಗಿತ ಹೊಂದಿರಲಿಲ್ಲ ಎಂದು ಸುಭಾಷ್ ಹೇಳಿದ್ದಾರೆ.
SCROLL FOR NEXT